ನಂಜನಗೂಡು: ದಸರಾ ಮಾದರಿಯಲ್ಲಿ ಇಡೀ ನಂಜನಗೂಡು ಪಟ್ಟಣಕ್ಕೆ ವಿದ್ಯುತ್ ದೀಪಾಲಂಕಾರ ಮಾಡಿ ಎಂದರೆ ನಿರ್ಲಕ್ಷ್ಯವಸುತ್ತೀರಾ ಎಂದು ಅಧಿಕಾರಿಗಳಿಗೆ ಎಡಿಸಿ ಡಾ.ಶಿವರಾಜು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ನಂಜನಗೂಡು ನಗರದ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದ ದಾಸೋಹ ಭವನದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ಅಧ್ಯಕ್ಷತೆಯಲ್ಲಿ ಏಪ್ರಿಲ್ 9 ರಂದು ನಡೆಯುವ ಶ್ರೀ ನಂಜುಂಡೇಶ್ವರ ಸ್ವಾಮಿ ದೊಡ್ಡ ಜಾತ್ರಾ ಮಹೋತ್ಸವದ ಎರಡನೇ ಹಂತದ ಪೂರ್ವಭಾವಿ ಸಭೆ ನಡೆಸಿದರು.

ಮೊದಲನೇ ಸಭೆಯಲ್ಲಿ ಸೂಚಿಸಿರುವ ಹಾಗೆ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ದಸರಾ ಮಾದರಿಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡುವಂತೆ ತಿಳಿಸಿದರು ಸರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ. ಭಾನುವಾರದ ತನಕ ಪಟ್ಟಣದಲ್ಲಿ ವಿದ್ಯುತ್ ದೀಪಗಳು ಬೆಳಗಬೇಕು. ಇಲ್ಲದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.

ನಮ್ಮನ್ನು ಕಂಡರೆ ಭಯಪಡುವುದು ಬೇಡ ನಂಜುಂಡೇಶ್ವರನ ಮೇಲೆ ಭಯ ಭಕ್ತಿ ಇಟ್ಟು ಜವಾಬ್ದಾರಿಯಿಂದ ಅಧಿಕಾರಿಗಳು ಕೆಲಸ ಮಾಡಿ ಎಂದು ಖಡಕ್ ಸೂಚನೆ ನೀಡಿದ್ದಾರೆ. ದುರಸ್ತಿಯಲ್ಲಿರುವ ರಥಗಳನ್ನು ಆದಷ್ಟು ಸರಿಪಡಿಸಬೇಕು. ಜವಾಬ್ದಾರಿಯಿಂದ ಅಧಿಕಾರಿಗಳು ಕೆಲಸ ಮಾಡಬೇಕು ಎಂದಿದ್ದಾರೆ.

ಸಭೆಯಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ , ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್‌ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.