ನಂಜನಗೂಡು: ವಿಚಾರಣೆಗಾಗಿ ಪೊಲೀಸರ ವಶದಲ್ಲಿದ್ದ ಆರೋಪಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ವಿಚಾರಣೆ ಎದುರಿಸುತ್ತಿದ್ದ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದು ಹೇಗೆ ಎಂಬ ವಿಚಾರವೇ ಆರೋಪಿಗೆ ಗೊತ್ತಿಲ್ಲ.

ಆಪರೇಷನ್ ಗೆ ಒಳಗಾದ ಆರೋಪಿ ತನ್ನ ಸ್ಥಿತಿಯ ಬಗ್ಗೆ ಕಣ್ಣೀರಿಡುತ್ತಾ ಅಸಹಾಯಕತೆ ತೋರಿಸುತ್ತಿದ್ದಾನೆ. ಪೊಲೀಸರ ಮುಂದಿದ್ದ ವ್ಯಕ್ತಿ ಆಸ್ಪತ್ರೆ ದಾಖಲಾಗಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವವಾಗಿದೆ. ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ನಿಗೂಢ ಪ್ರಕರಣವೊಂದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕೆಲವು ದಿನಗಳ ಹಿಂದೆ ನಂಜನಗೂಡು ತಾಲ್ಲೂಕಿನ ಹಲ್ಲರೆ ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಅಪಮಾನ ನಡೆದಿತ್ತು. ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ವಿರುದ್ದ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.

ಹತ್ತು ಆರೋಪಿಗಳ ಪೈಕಿ 7 ನೇ ಆರೋಪಿಯಾಗಿರುವ ಹಲ್ಲರೆ ಗ್ರಾಮದ ಸ್ವಾಮಿ ಸಹ ಒಬ್ಬರು. ಮೂರ್ನಾಲ್ಕು ದಿನಗಳ ಹಿಂದೆ ಸ್ವಾಮಿಯನ್ನು ಪೊಲೀಸರು ಮನೆಗೆ ಬಂದು ವಿಚಾರಣೆಗೆ ಕರೆದೊಯ್ದಿದ್ದರೆಂದು ಕುಟುಂಬದವರು ಹೇಳುತ್ತಿದ್ದಾರೆ. ಪೊಲೀಸರು ವಿಚಾರಣೆ ವೇಳೆ ಟಾರ್ಚರ್ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ನಂತರ ಸ್ವಾಮಿ ಮನೆಗೆ ಹಿಂದಿರುಗಿಲ್ಲ. ಮನೆಯವರು ಆತಂಕದಲ್ಲೇ ಕಾಲ ಕಳೆದಿದ್ದಾರೆ.

ಇದೀಗ ಸ್ವಾಮಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪೊಲೀಸರ ವಿಚಾರಣೆ ಎದುರಿಸುತ್ತಿದ್ದ ಸ್ವಾಮಿ ಆಸ್ಪತ್ರೆಗೆ ಬಂದಿದ್ದು ಹೇಗೆ ಎಂಬುದೇ ನಿಗೂಢವಾಗಿದೆ. ಈ ಬಗ್ಗೆ ಸ್ವಾಮಿಗೂ ಸರಿಯಾಗಿ ಗೊತ್ತಿಲ್ಲ. ಆಸ್ಪತ್ರೆಗೆ ದಾಖಲಾಗಿದ್ದು ಹೇಗೆ ಎಂಬ ಪ್ರಶ್ನೆ ಮಾಡಿದ್ರೆ ಬರೀ ಕಣ್ಣೀರು ಹಾಕಿ ಗೊತ್ತಿಲ್ಲ ಎನ್ನುತ್ತಿದ್ದಾರೆ. ಕುಟುಂಬದವರಿಗೂ ಈ ಬಗ್ಗೆ ಮಾಹಿತಿ ಇಲ್ಲ.

ಆಸ್ಪತ್ರೆ ಮೂಲಗಳೂ ಸಹ ಈ ವಿಚಾರವನ್ನು ಬಹಿರಂಗಪಡಿಸುತ್ತಿಲ್ಲ. ಸ್ವಾಮಿಗೆ ಮೇಜರ್ ಆಪರೇಷನ್ ಆಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಗುಟ್ಟು ಬಿಡದೆ ಮೌನಕ್ಕೆ ಜಾರಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ನೊಂದ ಕುಟುಂಬ ನ್ಯಾಯಕ್ಕಾಗಿ ಕಣ್ಣೀರಿಡುತ್ತಿದೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.