ನಂಜನಗೂಡು: ಒಳ ಮೀಸಲಾತಿ ವಿಚಾರದಲ್ಲಿ ನ್ಯಾಯ ಒದಗಿಸುವಂತೆ ಹೋರಾಟ ನಡೆಸುತ್ತಿದ್ದ ಸಮಿತಿ ಸದಸ್ಯರನ್ನ ಬಂಧಿಸಿದ ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಿನ್ನಲೆ ಸಮಿತಿ ಸದಸ್ಯರು ಎದೆ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಭಾವಚಿತ್ರ ಹಾಕಿಕೊಂಡು ಚಪ್ಪಲಿಯಿಂದ ಹೊಡೆದುಕೊಂಡು ಪ್ರತಿಭಟನೆ ನಡೆಸಿದ ಘಟನೆ ನಂಜನಗೂಡಿನಲ್ಲಿ ನಡೆದಿದೆ.
ಒಳಮೀಸಲಾತಿ ಸಮಿತಿ ಅಧ್ಯಕ್ಷ ಭಾಸ್ಕರ್ ಪ್ರಸಾದ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಒಳಮೀಸಲಾತಿ ವಿಚಾರದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಮೀಸಲಾತಿ ಸಮಿತಿ ಸದಸ್ಯರು ಟಿ.ನರಸೀಪುರದಲ್ಲಿರುವ ಬಿ.ರಾಚಯ್ಯ ಸಮಾಧಿ ಬಳಿ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.ಅನುಮತಿ ಇಲ್ಲದ ಕಾರಣ ಪೊಲೀಸರು ಪ್ರತಿಭಟನಾಕಾರರನ್ನ ಬಂಧಿಸಿ ನಂಜನಗೂಡಿನ ಅಂಬೇಡ್ಕರ್ ಭವನಕ್ಕೆ ಕರೆತಂದಿದ್ದಾರೆ.
ಈ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಭಟನಾಕಾರರನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ಆರೋಪಿಸಲಾಗಿದೆ. ಪೊಲೀಸರ ವರ್ತನೆಯನ್ನ ಖಂಡಿಸಿ ಪ್ರತಿಭಟನಾಕಾರರು ಅಂಬೇಡ್ಕರ್ ಭವನದ ಮುಂಭಾಗ ನಿಂತು ಪೊಲೀಸರ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ. ಮೈಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ರವರ ಭಾವಚಿತ್ರ ಹಾಕಿಕೊಂಡು ಚಪ್ಪಲಿಯಲ್ಲಿ ಹೊಡೆದುಕೊಂಡು ಪ್ರತಿಭಟನೆ ನಡೆಸಿದರು.
ಅವಾಚ್ಯ ಶಬ್ದ ಬಳಸಿದ ಪೊಲೀಸ್ ಅಧಿಕಾರಿ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದು ಒತ್ತಾಯಿಸಿದ್ದಾರೆ. ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ವಕೀಲ ಅರುಣ್ ಕುಮಾರ್, ಸುರೇಶ್, ನಾಗರಾಜು, ರಾಹುಲ್, ಮಹದೇವಯ್ಯ, ಮಂಜುನಾಥ್, ಪುಟ್ಟಣ್ಣ, ಮಹದೇವಸ್ವಾಮಿ, ಹನುಮೇಶ್, ವಿನೋದ್, ಅವಿನಾಶ್, ಸೇರಿದಂತೆ ಹಲವರು ಹಾಜರಿದ್ದರು.

