ನಂಜನಗೂಡು: ನನ್ನ ತೆರಿಗೆ ಹಣಕ್ಕೆ ಲೆಕ್ಕ ಕೇಳುವ ಅಭಿಯಾನಕ್ಕೆ ನಂಜನಗೂಡಿನಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್ ಕರೆ ನೀಡಿದ್ದಾರೆ.
ನಂಜನಗೂಡಿನಲ್ಲಿ ಈ ಬಗ್ಗೆ ಮಾತನಾಡಿದ ಅವರು, ಸರ್ಕಾರಿ ಕಛೇರಿಗಳಲ್ಲಿ ಸಾರ್ವಜನಿಕರ ಕೆಲಸವನ್ನು ಮಾಡದೆ ಇದ್ದರು ಅವರಿಗೆ ಸಂಬಳ ನೀಡುತ್ತಿರುವುದು ಎಷ್ಟರಮಟ್ಟಿಗೆ ಸರಿ. ನನ್ನ ತೆರಿಗೆ ಹಣಕ್ಕೆ ಲೆಕ್ಕ ಕೊಡಿ, ಕೆಲಸಕ್ಕೆ ತಕ್ಕಂತೆ ಸಂಬಳ ಕೊಡಿ ಎಂಬ ಅಭಿಯಾನಕ್ಕೆ ಚಾಲನೆ ನೀಡುತ್ತಿದ್ದೇವೆ. ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ವಾರ್ಷಿಕವಾಗಿ 90 ಕೋಟಿ ರೂ. ಹಣವನ್ನು ಸಂಬಳವಾಗಿ ನಾವು ನೀಡುತ್ತಿದ್ದೇವೆ.
ರೈತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಕೆಲಸಕ್ಕೆ ಕರೆದರೆ ದಿನಕ್ಕೆ ಇಂತಿಷ್ಟು ಕೂಲಿ ಹಣವನ್ನು ನೀಡುತ್ತಾರೆ. ಅವರು ಬೆವರು ಸುರಿಸಿ ದುಡಿದರು ಅವರ ಕೆಲಸಕ್ಕೆ ತಕ್ಕಂತೆ ಕೂಲಿ ಹಣ ಸಿಗುತ್ತಿಲ್ಲ. ಆದರೆ, ಸರ್ಕಾರಿ ಅಧಿಕಾರಿಗಳಿಗೆ ವಾಹನ ಕೊಟ್ಟು, ಎಸಿ ಕೆಳಗಡೆ ಕುಳಿತುಕೊಂಡು ಕೆಲಸ ಮಾಡಿ ಅಂದರೆ ಮಾಡುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಅಧಿಕಾರಿಗಳು ಮಾಡುತ್ತಿಲ್ಲ ಎಂದು ವ್ಯಾಪಕವಾಗಿ ದೂರುಗಳು ಕೇಳಿ ಬಂದಿವೆ.
ಟೇಬಲ್ ಕೆಳಗಡೆ ಕೊಡುತ್ತಿರುವವರ ಕೆಲಸ ಮಾತ್ರ ಆಗುತ್ತಿದೆ ಎಂದು ಆರೋಪಿಸಿದರು. ನಾವು 90 ಸಾವಿರ ಕೋಟಿ ರೂ. ಹಣವನ್ನು ನೀಡುತ್ತಿದ್ದೇವೆ. ಒಬ್ಬ ಅಧಿಕಾರಿ ಲಕ್ಷಾಂತರ ರೂ.ಗಳ ಸಂಬಳವನ್ನು ತೆಗೆದುಕೊಳ್ಳುತ್ತಿದ್ದಾರೆ. ಎಸಿ ಕಾರು ಕೊಟ್ಟಿದ್ದೇವೆ, ಆದರೂ ಕೆಲಸ ಮಾತ್ರ ಆಗ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ಗ್ರಾಮೀಣ ಪ್ರದೇಶದವರು, ಅವರಿಗೆ ರೈತರು ಬಡವರ ಕಷ್ಟ ಏನೆಂದು ತಿಳಿದಿದೆ. ಅಲ್ಲದೆ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು ರೈತರನ್ನು ಕಛೇರಿಗಳಿಗೆ ಅಲೆದಾಡಿಸಬೇಡಿ ಅವರ ಕೆಲಸ ಕಾರ್ಯಗಳನ್ನು ಮಾಡಿ ಎಂದು ಹೇಳಿದ್ದಾರೆ.
ಆದರೆ ಅದು ಮಾತಿಗಷ್ಟೇ ಸೀಮಿತವಾಗಿದೆ. ಪ್ರತಿದಿನ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ನೀಡುವ ಅರ್ಜಿಗಳನ್ನು ಎಷ್ಟು ವಿಲೇವಾರಿ ಮಾಡಿದ್ದಾರೆ ಎಂಬುದರ ಮೇಲೆ ಅವರಿಗೆ ಸಂಬಳ ಮಾಡಬೇಕು. ಇಲ್ಲದಿದ್ದರೆ ಗಂಟೆ ಹೊಡಿ, ಸಂಬಳ ತಗೋ. ಅನ್ನೋ ರೀತಿ ಆಗುತ್ತದೆ. ಸರ್ಕಾರಿ ಕಛೇರಿಗಳಿಗೆ ಅಲೆದು ಅಲೆದು ಸುಸ್ತಾಗುತ್ತಿದೆ. ನಿಮ್ಮ ಸರ್ಕಾರದಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ, ಮುಖ್ಯಮಂತ್ರಿಗಳು ಕೂಡ ನಮ್ಮ ಈ ಅಭಿಯಾನಕ್ಕೆ ಕೈಜೋಡಿಸಬೇಕು. ಸರ್ಕಾರಿ ನೌಕರರು ದಿನದಲ್ಲಿ ಎಷ್ಟು ಜನರ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ ಎಂಬುದರ ಮೇಲೆ ಅವರಿಗೆ ಸಂಬಳವನ್ನು ನಿಗದಿ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳು ಕಛೇರಿಗೆ ತೆರಳಿ ಬೆರಳಚ್ಚು ಕೊಟ್ಟರೆ ಸಂಬಳ ಬರುತ್ತದೆ ಎನ್ನುವ ದುರಾಲೋಚನೆ ಇದೆ.
ಕಛೇರಿಯಲ್ಲಿ ಕುಳಿತು ಹರಟೆ ಒಡೆದು ಮೊಬೈಲ್ ನೋಡಿಕೊಂಡು ಕುಳಿತ್ತಿದ್ದರು ಸಂಬಳದ ಜೊತೆ ಗಿಂಬಳೂ ಬರುತ್ತಿದೆ. ದಪ್ಪ ಚರ್ಮದ ಅಧಿಕಾರಿಗಳಿಗೆ ಸರ್ಕಾರ ಚಾಟಿ ಬೀಸಬೇಕು. ಸಾರ್ವಜನಿಕರ ಕೆಲಸವನ್ನು ಮಾಡಿದ್ದಾರಾ ಅಥವಾ ಇಲ್ಲವೇ ಎಂದು ಮೇಲಾಧಿಕಾರಿಗಳು ಪರಿಶೀಲಿಸಿದ ನಂತರ ಅವರ ಖಾತೆಗೆ ಸಂಬಳವನ್ನು ಜಮೆ ಮಾಡಬೇಕು. ಕರ್ನಾಟಕದಲ್ಲಿ ಇಡೀ ರಾಷ್ಟ್ರಕ್ಕೆ ಮಾದರಿಯಾಗುವಂತಹ ಕಾಯ್ದೆಯನ್ನು ಜಾರಿ ಮಾಡಬೇಕು. ಒಬ್ಬ ಅಧಿಕಾರಿ ಎಷ್ಟು ಕೆಲಸ ಮಾಡಿದ್ದಾರೆ ಎಂಬುದನ್ನು ಮನಗಂಡು ಸಂಬಳ ನಿಗದಿ ನೀಡಿದರೆ, ಕೆಲಸಗಳು ಆಗುತ್ತವೆ. ಯಾವೊಬ್ಬ ಅಧಿಕಾರಿಯು ಕಛೇರಿಗೆ ಬರುವುದಿಲ್ಲ. ಸರಿಯಾಗಿ ರೈತರ ಕೆಲಸವನ್ನು ಮಾಡುವುದಿಲ್ಲ ಅಂತವರಿಗೆ ಸಂಬಳ ನೀಡುತ್ತಿದ್ದಾರೆ.
ಇಂತಹ ಅಧಿಕಾರಿಗಳಿಗೆ ಸಂಬಳ ನೀಡುತ್ತಿರುವುದರಿಂದ ಸರ್ಕಾರದ ಖಜಾನೆ ಖಾಲಿಯಾಗುತ್ತಿದೆಯೇ ಹೊರತು, ಗ್ಯಾರಂಟಿ ಯೋಜನೆಗಳಿಂದಲ್ಲ. ಗ್ಯಾರಂಟಿ ಯೋಜನೆಗಳಿಂದ ಯಾವುದೇ ಹಣ ಪೋಲಾಗುತ್ತಿಲ್ಲ. ಪಂಚ ಗ್ಯಾರಂಟಿ ಯೋಜನೆಗಳಿಂದ ಜನರು ಬದುಕನ್ನು ಕಟ್ಟಿಕೊಂಡಿದ್ದಾರೆ. ಸಾರ್ವಜನಿಕರ ಕೆಲಸವನ್ನು ಮಾಡುವ ಅಧಿಕಾರಿಗಳಿಗೆ ಮಾತ್ರ ಸಂಬಳ ಕೊಡಿ, ಇನ್ನೂ ಮುಂದೆ ನಮ್ಮ ತೆರಿಗೆ ಹಣಕ್ಕೆ ಲೆಕ್ಕ ಕೊಡಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

