ನಂಜನಗೂಡು: ಕ್ರೀಡೆಗಳಲ್ಲಿ ಸೋಲು ಗೆಲುವನ್ನು ಕ್ರೀಡಾ ಪಟುಗಳು ಸಮಾನವಾಗಿ ಸ್ವೀಕರಿಸಬೇಕು. ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.

ನಂಜನಗೂಡು ನಗರದ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದ ದಾಸೋಹ ಭವನದ ಬಳಿ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಅಂಗವಾಗಿ ನರೇಂದ್ರ ಮೋದಿ ಅಭಿಮಾನಿಗಳ ಬಳಗ ಚಾಮಲಾಪುರ ಬೀದಿ ನಂಜನಗೂಡು ಇವರ ವತಿಯಿಂದ 45 ಜೊತೆ ನಾಡ ಕುಸ್ತಿ ಪಂದ್ಯಾವಳಿವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ದೇಶಾದ್ಯಂತ ಆಚರಣೆ ಮಾಡುತ್ತಿದ್ದಾರೆ. ನಂಜನಗೂಡಿನಲ್ಲೂ ಅವರ ಅಭಿಮಾನಿಗಳ ಬಳಗದ ವತಿಯಿಂದ ಕುಸ್ತಿ ಪಂದ್ಯಾವಳಿ ಆಯೋಜನೆ ಮಾಡಿರುವುದು ಸಂತಸ ತಂದಿದೆ.

ಕುಸ್ತಿ ಪಂದ್ಯಾವಳಿಯು ಜನಪ್ರಿಯ ಕ್ರೀಡೆಯಾಗಿದೆ.‌ ಇತಿಹಾಸ ಹೊಂದಿರುವ ಕುಸ್ತಿಯನ್ನು ಯುವ ಪೀಳಿಗೆಯೂ ಮುನ್ನಡೆಸಿಕೊಂಡು ಹೋಗಬೇಕು. ನಮ್ಮ ಶಿಕಾರಿಪುರದಲ್ಲೂ ಕುಸ್ತಿ ಪಂದ್ಯಾವಳಿಯನ್ನು ಮಾಡುತ್ತಿದ್ದೇವೆ. ಗ್ರಾಮೀಣ ಭಾಗದ ಕ್ರೀಡೆಗಳಲ್ಲಿ ಸ್ಪರ್ಧಿಗಳು ಭಾಗವಹಿಸುವುದು ಮುಖ್ಯವಾಗುತ್ತದೆ. ನಂಜನಗೂಡು ಮೈಸೂರು ಭಾಗದಲ್ಲಿ ಕುಸ್ತಿ ಕ್ರೀಡೆಯು ಪ್ರಸಿದ್ಧಿ ಹೊಂದಿದೆ ಇದನ್ನು ಉಳಿಸಿಕೊಂಡು ಹೋಗುವ ಕೆಲಸ ಮಾಡಬೇಕು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 11 ವರ್ಷಗಳಿಂದ ಒಂದು ದಿನವೂ ರಜೆಯನ್ನು ತೆಗೆದುಕೊಳ್ಳದೆ ಕೆಲಸ ಮಾಡುತ್ತಿದ್ದಾರೆ. ಭಾರತ ಅಭಿವೃದ್ಧಿಯಾಗಬೇಕು ಎಂದು ದೂರ ದೃಷ್ಟಿಯನ್ನು ಇಟ್ಟುಕೊಂಡು ಪಣತೊಟ್ಟಿದ್ದಾರೆ. ಜಿ ಎಸ್ ಟಿ ಯಿಂದ ದೇಶವು ಸುಧಾರಣೆ ಕಂಡಿದೆ. ಬೆಲೆ ಕಡಿಮೆಯಾಗಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಿದೆ ಎಂದರು.

ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾಜಿ ಶಾಸಕ ಬಿ. ಹರ್ಷವರ್ಧನ್ ಮಾತನಾಡಿ, ಕುಸ್ತಿ ಪಂದ್ಯಾವಳಿಗೆ ಸಾವಿರಾರು ವರ್ಷಗಳು ಇತಿಹಾಸವಿದೆ. ಗ್ರಾಮೀಣ ಭಾಗದಲ್ಲಿ ಇದನ್ನು ಉಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಕ್ರೀಡೆಗಳಲ್ಲಿ ಸೋಲು ಗೆಲುವು ಸರ್ವೆ ಸಾಮಾನ್ಯ. ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಗುರಿಯನ್ನು ತಲುಪುವುದು ಮುಖ್ಯ.‌

ಅತಿ ಚಿಕ್ಕ ವಯಸ್ಸಿನಲ್ಲಿ ವಿಜಯೇಂದ್ರ ಅವರು ಶಾಸಕರಾಗಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ. ಎರಡು ವರ್ಷಗಳಿಂದ ರಾಜ್ಯದಲ್ಲಿ ಸಂಘಟನೆ ಮಾಡುತ್ತಾರೆ. ರಾಜ್ಯಾಧ್ಯಕ್ಷರ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಿದ್ದಾರೆ. ನಂಜನಗೂಡು ಒಂದು ಕರ್ಮಭೂಮಿಯಾಗಿದೆ.‌ ನಾನು ನಾಮಪತ್ರ ಸಲ್ಲಿಸುತ್ತಾ ವೇಳೆ ವರುಣಾ ಕ್ಷೇತ್ರದಿಂದ ವಿಜಯೇಂದ್ರ ಅವರಿಗೆ ಅವಕಾಶ ಕೈ ತಪ್ಪಿತು. ನಂತರ ಶಾಸಕರಾಗಿ ಇಂದು ರಾಜ್ಯ ಅಧ್ಯಕ್ಷರಾಗಿ ನಂಜುಂಡೇಶ್ವರನ ಸನ್ನಿಧಿಗೆ ಬಂದಿದ್ದಾರೆ.‌ ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿ ಬರಬೇಕು ಎಂದು ನುಡಿದರು.

ಈ ಸಂದರ್ಭದಲ್ಲಿ ಶಾಸಕರಾದ ಟಿ ಎಸ್ ಶ್ರೀ ವತ್ಸ, ಮಾಜಿ ಶಾಸಕರಾದ ಎಲ್.ನಾಗೇಂದ್ರ, ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷ ರಘು ಕೌಟಿಲ್ಯ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಕುಂಬರಹಳ್ಳಿ ಸುಬ್ಬಣ್ಣ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಸಿದ್ದರಾಜು, ನಗರಸಭಾ ಸದಸ್ಯ ಮಹದೇವ ಪ್ರಸಾದ್, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಕೆಂಡಗಣ್ಣಪ್ಪ, ಹೆಮ್ಮರಗಾಲ ಸೋಮಣ್ಣ, ಸಿಂಧುವಳ್ಳಿ ಕೆಂಪಣ್ಣ, ಸಿದ್ದರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.

ವೇದಿಕೆ ಕಾರ್ಯಕ್ರಮದಲ್ಲಿ ಬಿ.ವೈ ವಿಜಯೇಂದ್ರ ಅವರು ಮಾತನಾಡುತ್ತಿದ್ದ ವೇಳೆ ಮುಂದಿನ ಮುಖ್ಯಮಂತ್ರಿಯಾಗಿ ವಿಜಯೇಂದ್ರ ಅವರು ಬರಬೇಕು ಎಂದು ಘೋಷಣೆಗಳು ಹೋಗಿ ಬಂದವು. ಇದಕ್ಕೆ ಧ್ವನಿಯಾಗಿ ಮಾಜಿ ಶಾಸಕ ಬಿ.ಹರ್ಷವರ್ಧನ್ ಕೂಡ ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿ ಬರಬೇಕು ಎಂದು ವೇದಿಕೆಯಲ್ಲಿ ಹೇಳಿದರು. ನೆರೆದಿದ್ದ ಬಿಜೆಪಿ ಪಕ್ಷದ ಕಾರ್ಯಕರ್ತರು ಮುಖಂಡರು ಮುಂದಿನ ಸಿಎಂ ಎಂದು ಘೋಷಣ ಕೂಗಿದರು. ಇದಕ್ಕೆ ನಗು ಮುಖದಲ್ಲಿ ವಿಜಯೇಂದ್ರ ಕೈ ಸನ್ನೆ ಮಾಡಿ ತೆರಳಿದರು.