ಮೈಸೂರು: ಮೈಸೂರಿನ ಕಾಲೇಜಿನ ಹಾಸ್ಟೆಲ್‌ವೊಂದರಲ್ಲಿ ವಿದ್ಯಾರ್ಥಿನಿಯೊಬ್ಬಳು ಅನಾರೋಗ್ಯದಿಂದ ಮೃತಪಟ್ಟಿರುವ ಘಟನೆ ನಡೆದಿದೆ.

ದಕ್ಷ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತಿದ್ದ ಜಯಪ್ರಾರ್ಥನಾ (17) ಮೃತಪಟ್ಟ ವಿದ್ಯಾರ್ಥಿನಿ. ಪೋಷಕರಿಗೆ ಘಟನೆಯ ಬಗ್ಗೆ ಕಾಲೇಜು ಆಡಳಿತ ಮಂಡಳಿ ಮಾಹಿತಿ ನೀಡಿದೆ. ವಿದ್ಯಾರ್ಥಿನಿಯ ಸಾವಿಗೆ ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ. ಏಕಾಏಕಿ ಅನಾರೋಗ್ಯ ಉಂಟಾಗಿದ್ದ ಕಾರಣ ಮೃತಪಟ್ಟಿದ್ದಾಳೆ ಎಂದು ಹೇಳಲಾಗಿದೆ.

ಮೈಸೂರಿನ ಹೂಟಗಳ್ಳಿಯಲ್ಲಿರುವ ಕಾಲೇಜಿನ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತಿದ್ದ ಜಯಪ್ರಾರ್ಥನಾ ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನವರಾಗಿದ್ದಾರೆ. ಭಾನುವಾರ ಊಟದ ನಂತರ ಜಯಪ್ರಾರ್ಥನಾ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು.

ವಿಚಾರ ತಿಳಿದು ಖಾಸಗಿ ಆಸ್ಪತ್ರೆಯಲ್ಲಿ ಆಡಳಿತ ಮಂಡಳಿ ಚಿಕಿತ್ಸೆ ಕೊಡಿಸಿತ್ತು. ಆದರೆ ಅನಾರೋಗ್ಯದ ವಿಚಾರವನ್ನು ಪೋಷಕರ ಗಮನಕ್ಕೆ ತರದೇ ನಿರ್ಲಕ್ಷ್ಯ ತೋರಿತ್ತು. ಸೋಮವಾರ ಬೆಳಗ್ಗೆ ಜಯಪ್ರಾರ್ಥನಾಳ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿತ್ತು. ಆ ಸಮಯದಲ್ಲಿ ವಿಷಯವನ್ನು ಪೊಷಕರಿಗೆ ತಿಳಿಸಿದ್ದಾರೆ.

ಪೋಷಕರು ಆಸ್ಪತ್ರೆಗೆ ಬರುವ ಮುನ್ನವೇ ಜಯಪ್ರಾರ್ಥನಾ ಮೃತಪಟ್ಟಿದ್ದಾಳೆ. ಮಗಳ ಸಾವಿಗೆ ಕಾಲೇಜು ಆಡಳಿತ ಮಂಡಳಿಯ ಕಾರಣ ಎಂದು ಪೋಷಕರ ಆರೋಪ ಮಾಡಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.