ನಂಜನಗೂಡು: ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರಿಗಾಗಿ ಜನ, ಜಾನುವಾರುಗಳು ತತ್ತರಿಸುವಂತಾಗಿವೆ. ಜೀವ ಜಲಕ್ಕಾಗಿ ಗ್ರಾಮಸ್ಥರು ಅಲೆದಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ದಾಸನೂರು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುವಂತಾಗಿದೆ.

ದಾಸನೂರು ಗ್ರಾಮದಲ್ಲಿ 3 ಸಾವಿರ ಜನಸಂಖ್ಯೆ ಇದ್ದು, ಎರಡು ಓವರ್ ಹೆಡ್ ಟ್ಯಾಂಕ್ ಗಳಲ್ಲಿ ಸರ್ಬರಾಜುವ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಕಪಿಲಾ ನದಿಯಿಂದ ಶುದ್ಧೀಕರಿಸಿ ಬರುವ ನೀರು ಬರುತ್ತಿಲ್ಲ. ದಾಸನೂರು, ದೊಡ್ಡಹೊಮ್ಮ, ಚಿಕ್ಕಹೊಮ್ಮ, ಕಾರೇಮೊಳೆ, ತೊರವಳ್ಳಿ, ಅಂಕುಶರಾಯನಪುರ, ತೊರವಳ್ಳಿ ಮೊಳೆ ಗ್ರಾಮಗಳಲ್ಲಿಯೂ ನೀರಿಗಾಗಿ ಹಾಹಾಕಾರ ಉಂಟಾಗಿದೆ.

ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯನಿರ್ವಹಿಸದೆ ಕೆಟ್ಟು ನಿಂತಿದೆ. ತೊಂಬೆ ನಲ್ಲಿಗಳಿಗೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಕುಡಿಯುವ ನೀರನ್ನು ನಾಲ್ಕು ದಿನಕ್ಕೆ ಒಂದು ಸಾರಿ ಮಾತ್ರ ಬಿಡುತ್ತಾರೆ. ಇದರಿಂದ ಗ್ರಾಮದಲ್ಲಿ ಜನರಿಗೆ ಮತ್ತು ಜಾನುವಾರುಗಳಿಗೆ ತುಂಬಾ ತೊಂದರೆಯಾಗಿತ್ತಿದೆ.

ಕಳೆದ ಎರಡ್ಮೂರು ತಿಂಗಳಿನಿಂದಲೂ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಸ್ಥಗಿತಗೊಂಡಿರುವ ಕಪಿಲಾ ನದಿ ನೀರನ್ನು ಸರಬರಾಜು ಮಾಡಬೇಕು. ಕೆಟ್ಟು ನಿಂತಿರುವ ಗೇಟ್ ವಾಲ್ ಮತ್ತು ಶುದ್ಧ ಕುಡಿಯುವ ನೀರಿನ ಘಟಕವನ್ನು ರಿಪೇರಿ ಮಾಡಿಸಬೇಕು ಎಂದು ಗ್ರಾಮ ಪಂಚಾಯಿತಿಗೆ ಎಷ್ಟೇ ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ.

ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ಗ್ರಾಮ ಪಂಚಾಯಿತಿ ಆಡಳಿತ ವಿಫಲವಾಗಿದೆ. ಹೆಸರಿಗಷ್ಟೇ ಮುಖ್ಯಮಂತ್ರಿಗಳ ಕ್ಷೇತ್ರವಾಗಿದೆ. ಆದರೆ, ಯಾವುದೇ ಪ್ರಯೋಜನವಿಲ್ಲ. ಇನ್ನಾದರೂ ತಾಲ್ಲೂಕು ಆಡಳಿತ ಎಚ್ಚೆತ್ತುಕೊಂಡು ಕುಡಿಯುವ ನೀರನ್ನು ಪೂರೈಕೆ ಮಾಡುವವರೇ ಕಾದು ನೋಡಬೇಕಿದೆ.