ಮೈಸೂರು : ಆಟವಾಡುತ್ತಿದ್ದ ಮಗು ಕರೆದಾಗ ಬರಲಿಲ್ಲವೆಂಬ ಕಾರಣಕ್ಕೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹುಣಸೂರು ತಾಲೂಕು ಬೀರನಹಳ್ಳಿ ಗ್ರಾಮದಲ್ಲಿ ನಡೆದಿದೆ. ದೊಣ್ಣೆಯಿಂದ ಹೊಡೆದು ಮಗುವಿನ ಎರಡು ಕೈಗಳನ್ನ ಚಿಕ್ಕಪ್ಪ ಮುರಿದಿದ್ದಾರೆ.
ಆನಂದ್ (23) ಪೈಶಾಚಿಕ ಕೃತ್ಯ ನಡೆಸಿ ಪೊಲೀಸರ ಅತಿಥಿಯಾದ ಆರೋಪಿ. ಚಿಕ್ಕಪ್ಪನ ದುಷ್ಕೃತ್ಯಕ್ಕೆ ಕೈಮುರಿದುಕೊಂಡ ಅಮಾಯಕ ಬಾಲಕಿ ಜಾನ್ವಿ(3). ಆಟೋ ಓಡಿಸುತ್ತಿದ್ದ ಆನಂದ್ ನಿನ್ನೆ ಶನಿವಾರ ರಜೆ ಇದ್ದ ಕಾರಣ ಮನೆಯಲ್ಲಿ ಆಟವಾಡುತ್ತಿದ್ದ ಜಾನ್ವಿಯನ್ನ ಕರೆದಿದ್ದಾನೆ.

ಆನಂದ್ ಜೊತೆ ಹೋಗಲು ಜಾನ್ವಿ ನಿರಾಕರಿಸಿದ್ದಾಳೆ. ಹೀಗಾಗಿ ಜಾನ್ವಿಯನ್ನ ಬಲವಂತವಾಗಿ ಆಟೋದಲ್ಲಿ ಕರೆದೊಯ್ದು ದೊಣ್ಣೆಯಿಂದ ಹಿಗ್ಗಾಮುಗ್ಗ ಆರೋಪಿ ಥಳಿಸಿದ್ದಾನೆ. ದುಷ್ಕೃತ್ಯಕ್ಕೆ ಸಿಲುಕಿ ಗಾಯಗೊಂಡ ಜಾನ್ವಿಗೆ ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರಿಂದ ಕಟುಕ ಚಿಕ್ಕಪ್ಪನನ್ನ ಬಂಧಿಸಲಾಗಿದೆ.

