ಮೈಸೂರು: ಸ್ಕೂಟರ್ ನಲ್ಲಿ ಹೋಗುತ್ತಿದ್ದ ಮಹಿಳೆ ಕಣ್ಣಿಗೆ ಖಾರದಪುಡಿ ಎರಚಿ ಚಿನ್ನದ ಸರ ಕಸಿದ ಘಟನೆ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಿರಿದರ್ಶಿನಿ ಬಡಾವಣೆ ನಿವಾಸಿ ಸೌಮ್ಯ (39) ಚಿನ್ನದ ಸರ ಕಳೆದುಕೊಂಡವರು.

ತಮ್ಮ ಮಕ್ಕಳನ್ನ ಶಾಲೆಗೆ ಬಿಟ್ಟು ಮನೆಗೆ ಸ್ಕೂಟರ್ ನಲ್ಲಿ ಹಿಂದಿರುಗುವ ವೇಳೆ ಲಲಿತಾದ್ರಿಪುರದಿಂದ ಆಲನಹಳ್ಳಿ ಕಚ್ಚಾ ರಸ್ತೆಯಲ್ಲಿ ಸಾಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಕಣ್ಣಿಗೆ ಖಾರದಪುಡಿ ಎರಚಿದ್ದಾನೆ. ಈ ವೇಳೆ ಸೌಮ್ಯ ಸ್ಕೂಟರ್ ನಿಂದ ಕೆಳಗೆ ಬಿದ್ದಿದ್ದಾರೆ.

ಕುತ್ತಿಗೆಗೆ ಕೈ ಹಾಕಿದ ಖದೀಮ ಮಾಂಗಲ್ಯ ಸರ ಕಸಿಯಲು ಯತ್ನಿಸಿದ್ದಾನೆ. ಕಣ್ಣಿಗೆ ಖಾರದ ಪುಡಿ ಎರಚಿದ್ದರೂ ಸರ ಕೈಲಿ ಹಿಡಿದು ಪ್ರತಿರೋಧಿಸಿದ್ದಾರೆ. 45 ಗ್ರಾಂ ಸರದಲ್ಲಿ 20 ಗ್ರಾಂ ಸರ ಖದೀಮನ ಕೈ ಸೇರಿದೆ. ಖಾರದ ಪುಡಿ ಎರಚಿದ ಪರಿಣಾಮ ಸುಧಾರಿಸಿಕೊಂಡು ಆಲನಹಳ್ಳಿ ಠಾಣೆಗೆ ಬಂದು ಸೌಮ್ಯ ಪ್ರಕರಣ ದಾಖಲಿಸಿದ್ದಾರೆ.