ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನ ಚಿಕ್ಕ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ರಾತ್ರಿ ಕಪಿಲಾ ನದಿಯಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿಯ ತೆಪ್ಪೋತ್ಸವ ವಿಜೃಂಭಣೆಯಿಂದ ಜರುಗಿತು.

ಪಾರ್ವತಿ ಸಮೇತ ಶ್ರೀ ಶ್ರೀ ನಂಜುಂಡೇಶ್ವರ ಸ್ವಾಮಿಯವರ ಉತ್ಸವ ಮೂರ್ತಿಗಳನ್ನ ಕಪಿಲಾ ನದಿ ತೀರದಲ್ಲಿರುವ ಮಂಟಪದಲ್ಲಿರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್‌ ನೇತೃತ್ವದ ಅರ್ಚಕರ ತಂಡ ವೇದ ಮಂತ್ರಗಳನ್ನು ಪಠಿಸಿ, ಉತ್ಸವ ಮೂರ್ತಿಗಳಿಗೆ ಮಹಾಮಂಗಳಾರತಿ ಸೇರಿ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಅಲ್ಲಿಂದ ಕಪಿಲಾ ನದಿಯಲ್ಲಿ ಬಣ್ಣ ಬಣ್ಣದ ಹೂ ಹಾಗೂ ವಿದ್ಯುತ್‌ ದೀಪಾಲಂಕಾರ ತೇಲುವ ದೋಣಿಯಲ್ಲಿ ಉತ್ಸವ ಮೂರ್ತಿಗಳನ್ನು ಇಟ್ಟು, ಕಪಿಲಾ ನದಿಯಲ್ಲಿ ಪೂರ್ವ ಪಶ್ಚಿಮವಾಗಿ ಮೂರು ಸುತ್ತು ಪ್ರದಕ್ಷಿಣೆ ಹಾಕಿಸಲಾಯಿತು.

ಸಡಗರ ಸಂಭ್ರಮದಿಂದ ತೇಲುವ ತೆಪ್ಪದಲ್ಲಿ ವಿಜೃಂಭಣೆಯಿಂದ ತೆಪ್ಪೋತ್ಸವ ನಡೆಸಲಾಯಿತು. ತೆಪ್ಪೋತ್ಸವ ಮುಗಿದ ಬಳಿಕ ಉತ್ಸವ ಮೂರ್ತಿಗಳನ್ನ ಮಂಗಳವಾದ್ಯದ ಜೊತೆ ಪಟ್ಟಣದ ರಥ ಬೀದಿಯಲ್ಲಿ ಅದ್ದೂರಿ ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ನೆರೆದಿದ್ದ ನೂರಾರು ಭಕ್ತರು ಪಾರ್ವತಿ ಸಮೇತ ಶ್ರೀ ನಂಜುಂಡಸ್ವಾಮಿಯ ಉತ್ಸವ ಮೂರ್ತಿಗಳನ್ನ ಕಂಡು, ಪೂಜೆ ಸಲ್ಲಿಸಿ ಈಡುಗಾಯಿ ಹೊಡೆದು ಶ್ರದ್ದಾ ಭಕ್ತಿ ಮೆರೆದರು.

ಇನ್ನು ಕಪಿಲಾ ನದಿಯಲ್ಲಿ ಸೇರಿದ್ದ ನೂರಾರು ಭಕ್ತರು, ತೇಲುವ ದೋಣಿಯಲ್ಲಿ ನಡೆದ ಉತ್ಸವ ಮೂರ್ತಿ ಕಂಡು ಪುಳಕಿತರಾದರು. ಬಣ್ಣ ಬಣ್ಣದ ಅಲಂಕಾರದೊಂದಿಗೆ ನದಿ ತೀರದಲ್ಲಿ ವಿಹರಿಸುತ್ತಿದ್ದ ಉತ್ಸವ ಮೂರ್ತಿಗಳನ್ನ ಕಂಡು ಕೈ ಮುಗಿದು ನಮಸ್ಕರಿಸಿದ್ರೇ, ಇನ್ನು ಕೆಲವರು ಕೈಯಲ್ಲಿ ಹಿಡಿದಿದ್ದ ಮೊಬೈಲ್‌ ಮೂಲಕ ತೆಪ್ಪೋತ್ಸವದ ಅಪರೂಪದ ಕ್ಷಣವನ್ನ ಸೆರೆ ಹಿಡಿದು, ಧನ್ಯತರಾದರು. ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ್‌ ಕುಮಾರ್ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು. ಸ್ಥಳದಲ್ಲಿ ಅಗ್ನಿಶಾಮಕ ದಳ ಹಾಗೂ ಪೊಲೀಸ್‌ ಸಿಬ್ಬಂದಿಗಳು ಹಾಜರಿದ್ದರು.