ಮೈಸೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಪ್ರತಿ ಗ್ರಾಮದ ಜನರ ಮನೆ ಬಾಗಿಲು ತಟ್ಟುತ್ತಿದೆ. ಮೈಸೂರು ಜಿಲ್ಲೆಯ ಕೆ.ಆರ್ ನಗರ ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದ ಚಂದ್ರಶೇಖರ್ ನರೇಗಾ ಮತ್ತು ರೇಷ್ಮೆ ಇಲಾಖೆಯಿಂದ ಸೌಲಭ್ಯ ಪಡೆದು ಸಂತಸದ ನಗೆ ಬೀರಿದ್ದಾರೆ.

ನೀರಾವರಿ ಜಮೀನು ಹೊಂದಿದ್ದರೂ ಪ್ರಾರಂಭದಲ್ಲಿ ಟೊಮೋಟೊ, ಬೀನ್ಸ್, ಎಲೆಕೋಸು ಸೇರಿ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ ಇವುಗಳಿಂದಾಗಿ ಚಂದ್ರಶೇಖರ್ ಸಾಕಷ್ಟು ನಷ್ಟ ಅನುಭವಿಸಿ ಸಾಲದ ಹೊರೆಯಿಂದ ತತ್ತರಿಸುತ್ತಿದ್ದರು. ಆದರೆ, ಎಲ್ಲರಂತೆ ಎದೆಗುಂದದೆ ಕೃಷಿಯಲ್ಲೇ ಏನಾದರೂ ಸಾಧಿಸಬೇಕೆಂದು ಛಲ ಹಿಡಿದು ಹೊಸ ಸಾಹಸಕ್ಕೆ ಮುಂದಾಗಿ ನರೇಗಾ ಯೋಜನೆಯಡಿ ರೇಷ್ಮೆ ಬೆಳೆದು ಯಶಸ್ಸು ಕಂಡು ಅದರ ಫಲವನ್ನು ಅನುಭವಿಸುತ್ತಿದ್ದಾರೆ.

ನರೇಗಾ ಯೋಜನೆಯಡಿ ಇದಕ್ಕೆ ವಿಶೇಷ ಪ್ರೋತ್ಸಾಹದ ಧನವಿದೆ ಎಂಬ ಮಾಹಿತಿ ಪಡೆದ ಇವರು ತಡ ಮಾಡದೇ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಇವರಿಗೆ ಪಿ.ಡಿ.ಓ ಅವರು ಮಾಹಿತಿ ನೀಡಿದರು. ಬಳಿಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮಾರ್ಗದರ್ಶನದಂತೆ ಕ್ರಿಯಾ ಯೋಜನೆಯಲ್ಲಿ ರೇಷ್ಮೆ ಕಾಮಗಾರಿಯ ಹೆಸರು ನೋಂದಾಯಿಸಿದರು. ನಂತರ ಗ್ರಾಮ ಪಂಚಾಯಿತಿ ಹಾಗೂ ರೇಷ್ಮೆ ಇಲಾಖೆಯ ಸಹಭಾಗಿತ್ವದಲ್ಲಿ ಕಾಮಗಾರಿಯನ್ನು ಪ್ರಾರಂಭಿಸಿದರು.

ಚಂದ್ರಶೇಖರ್ ಅವರಿಗೆ 2 ಎಕರೆ ಜಮೀನಿದ್ದು, ತಮ್ಮ 1 ಎಕರೆ ಜಮೀನಿನಲ್ಲಿ ನರೇಗಾ ಯೋಜನೆಯಡಿ ರೇಷ್ಮೆ ಇಲಾಖೆಯಿಂದ 1 ಲಕ್ಷ ವೆಚ್ಚದಲ್ಲಿ ಹಿಪ್ಪೆ ನೇರಳೆ ತೋಟ ಮಾಡಿ ಯಶಸ್ಸು ಕಂಡಿದ್ದಾರೆ. ಇದರಿಂದಾಗಿ ಒಟ್ಟು 221 ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ.

ತಿಂಗಳಿಗೆ 60 ರಿಂದ 70 ಸಾವಿರ ಆದಾಯ: ರೇಷ್ಮೆ ಬೆಳೆದ ಪ್ರಾರಂಭದಿಂದಲೂ ಚಂದ್ರಶೇಖರ್ ಅವರು ಅದನ್ನು ಮಗುವಿನಂತೆ ಪಾಲನೆ-ಪೋಷಣೆ ಮಾಡಿ, ಪ್ರತಿ ತಿಂಗಳು 80 ರಿಂದ 100 ಕೆ.ಜಿ ಗೂಡನ್ನು ಬೆಳೆದು ಪ್ರತಿ ಕೆ.ಜಿಗೆ 600 ರಂತೆ ಮೈಸೂರಿನ ಬಂಡಿಪಾಳ್ಯದ ಕೃಷಿ ರೇಷ್ಮೆ ಮಾರುಕಟ್ಟೆಗೆ ಮಾರಾಟ ಮಾಡುತ್ತಿದ್ದು. ಪ್ರತಿ ತಿಂಗಳು 60 ರಿಂದ 70 ಸಾವಿರ ರೂ ಆದಾಯ ಗಳಿಸುತ್ತಿದ್ದಾರೆ. ರೇಷ್ಮೆಯಿಂದ ಕೈತುಂಬ ಆದಾಯ ಬರುತ್ತಿರುವುದರಿಂದ ಕುಟುಂಬದ ಭಾಗ್ಯಲಕ್ಷ್ಮಿ ಬಾಗಿಲು ತೆರೆದಂತಾಗಿದೆ ಎಂದು ಸಂತೋಷದಿಂದ ಸಂಭ್ರಮಿಸುತ್ತಿದ್ದಾರೆ.

ಬಿಸಿಲು ಮಳೆ ಗಾಳಿಯಿಂದ ಫಲವತ್ತಾದ ರಕ್ಷಣೆ ಮಾಡಲಾಗುತ್ತಿದ್ದು, ವೈಯಕ್ತಿಕ ಫಲಾನುಭವಿಗಳಿಗೆ ಉದ್ಯೋಗ ಲಭ್ಯವಾಗಿ ಆರ್ಥಿಕ ಸಹಾಯ ದೊರಕಿದಂತಾಗಿದೆ. ಹಿಪ್ಪುನೆರಳೆ ತೋಟ ನಿರ್ಮಾಣದಿಂದ ಇಳುವರಿ ಹೆಚ್ಚಾಗಿದ್ದು, ಇವರ ಕುಟುಂಬದಲ್ಲಿ ಹರ್ಷ ತುಂಬಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಬಳಸಿಕೊಂಡಿದ್ದಲ್ಲದೆ ಅಕ್ಕಪಕ್ಕದ ರೈತರಿಗೂ ಕೂಡ ಈ ಯೋಜನೆಯನ್ನು ಬಳಸಿಕೊಳ್ಳಲು ಚಂದ್ರಶೇಖರ್ ಅವರು ಪ್ರೇರೇಪಣೆ ನೀಡುತ್ತಿದ್ದಾರೆ.