ನಂಜನಗೂಡು: ಕಾಡಿನಿಂದ ನಾಡಿಗೆ ಬಂದ ಜಿಂಕೆಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು, ನಾಯಿಗಳ ದಾಳಿಯಿಂದ ಜಿಂಕೆಯನ್ನು ರಕ್ಷಿಸಲು ಮುಂದಾದ ವ್ಯಕ್ತಿಗೆ ಜಿಂಕೆಯ ಕೊಂಬು ಹೊಟ್ಟೆಗೆ ಚುಚ್ಚಿ ಗಂಭೀರ ಗಾಯಗೊಂಡಿರುವ ಘಟನೆ ನಂಜನಗೂಡು ತಾಲ್ಲೂಕಿನ ಗಟ್ಟವಾಡಿ ಗ್ರಾಮದಲ್ಲಿ ನಡೆದಿದೆ.

ಗಟ್ಟವಾಡಿ ಗ್ರಾಮದ ಚಿನ್ನಸ್ವಾಮಿ (50) ಗಾಯಗೊಂಡ ವ್ಯಕ್ತಿ. ನಾಯಿಗಳು ಜಿಂಕೆಯ ಮೇಲೆ ದಾಳಿ ನಡೆಸುತ್ತಿದ್ದ ವೇಳೆ ಜಿಂಕೆಯನ್ನು ರಕ್ಷಿಸಲು ಮುಂದಾದಾಗ, ಜಿಂಕೆಯ ಕೊಂಬು ಚಿನ್ನಸ್ವಾಮಿ ಅವರ ಹೊಟ್ಟೆಗೆ ಚುಚ್ಚಿದೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡ ಚಿನ್ನಸ್ವಾಮಿಯನ್ನು ತಕ್ಷಣ ನಂಜನಗೂಡು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ರವಾನಿಸಲಾಗಿದೆ. ಇದೇ ವೇಳೆ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ವೈದ್ಯರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಗಾಯಾಳು ಕುಟುಂಬಸ್ಥರು ಆರೋಪಿಸಿದ್ದಾರೆ.

ಘಟನೆ ತಿಳಿದು ಅರಣ್ಯ ಇಲಾಖೆಯ ಅಧಿಕಾರಿಗಳು ಗಟ್ಟವಾಡಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಂಕೆ ಎಲ್ಲಿಂದ ಗ್ರಾಮಕ್ಕೆ ಬಂದಿದೆ ಹಾಗೂ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.