ನಂಜನಗೂಡು: ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ, ಬೈಕ್ ನಲ್ಲಿ ತೆರಳುತ್ತಿದ್ದ ದಂಪತಿಗಳು ಮತ್ತು ಓರ್ವ ಮಹಿಳೆ ಸೇರಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಂಜನಗೂಡು ತಾಲ್ಲೂಕಿನ ಸಂಗಮ ಮತ್ತು ಹುಲ್ಲಹಳ್ಳಿ ಮುಖ್ಯರಸ್ತೆಯಲ್ಲಿ ನಡೆದಿದೆ.
ಹಂಚೀಪುರ ಗ್ರಾಮದ ಚಿಕ್ಕ ಸ್ವಾಮಿ (45) ಪತ್ನಿ ರೂಪ (38) ಕಣೇನೂರು ಗ್ರಾಮದ ಚನ್ನಮಲ್ಲಮ್ಮ (55) ಮೃತ ದುರ್ದೈವಿಗಳು. ಚಿಕ್ಕಸ್ವಾಮಿ, ಪತ್ನಿ ರೂಪ ಮತ್ತು ಚನ್ನಮಲ್ಲಮ್ಮ ಎಂಬುವವರು ಬೈಕ್ ವೇಳೆ ಲಾರಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ಮತ್ತು ಇಬ್ಬರು ಮಹಿಳೆಯರ ಮೇಲೆ ಲಾರಿಯ ಚಕ್ರ ಹರಿದಿದೆ. ಇದರ ಪರಿಣಾಮ ಸ್ಥಳದಲ್ಲಿಯೇ ಮೂವರು ಅಸುನೀಗಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಡಿವೈಎಸ್ಪಿ ರಘು, ಪಿಎಸ್ಐ ಚೇತನ್ ಕುಮಾರ್, ಅಪರಾಧ ವಿಭಾಗದ ರಸೂಲ್ ಪಾಗವಾಲೆ, ಎಸ್ ಐ ಶಿವಣ್ಣ, ದೊಡ್ಡಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಮಿಳುನಾಡು ಮೂಲದ ಲಾರಿಯಾಗಿದ್ದು, ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಂತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

