ನಂಜನಗೂಡು: ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿರುವುದು ಒಂದೆಡೆಯಾದರೆ, ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಯ ಭಾಗ್ಯವೇ ಕಂಡಿಲ್ಲ.

ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಮುಳ್ಳೂರು ಗ್ರಾಮದಲ್ಲಿ ಕಳೆದ 8 ವರ್ಷಗಳ ಹಿಂದೆ ಜಿಲ್ಲಾ ಪಂಚಾಯತ್ ಮೈಸೂರು ಹೊರಳವಾಡಿ ಗ್ರಾಮ ಪಂಚಾಯಿತಿ ಮತ್ತು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ವತಿಯಿಂದ ನಿರ್ಮಿಸಲಾಗಿತ್ತು. ಆದರೆ, ಎಂಟು ವರ್ಷಗಳು ಕಳೆಯುತ್ತಾ ಬಂದಿದ್ದರು ನೀರಿನ ಘಟಕ ಮಾತ್ರ ಉದ್ಘಾಟನೆಯಾಗಿಲ್ಲ.

ಘಟಕಕ್ಕೆ ಲಕ್ಷಾಂತರ ವೆಚ್ಚದಲ್ಲಿ ಖರ್ಚು ಮಾಡಿ ಅಳವಡಿಸಿರುವ ವಸ್ತುಗಳು ತುಕ್ಕು ಹಿಡಿದಿದ್ದೇವೆ.‌ ಅನುದಾನವನ್ನು ಖರ್ಚು ಮಾಡಿಕೊಂಡು ಅಧಿಕಾರಿಗಳು ನುಂಗಿ ನೀರು ಕುಡಿದಿದ್ದಾರೆ. ಆದರೆ, ನೀರು ಸರಬರಾಜು ಮಾಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಕುಡಿಯುವ ನೀರಿನ ಘಟಕ ಈಗ ಜಾನುವಾರುಗಳನ್ನು ಕಟ್ಟಿ ಹಾಕುವ ಕೊಟ್ಟಿಗೆ ರೂಪವನ್ನು ತಾಳಿದೆ. ಇನ್ನೂ ಗ್ರಾಮದಲ್ಲಿರುವ ಬೋರ್ವೆಲ್ ನೀರು ಕೂಡ ಅಶುದ್ಧವಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ.‌ ಈ ಬಗ್ಗೆ ಹೊರಳವಾಡಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ ಎಷ್ಟೇ ದೂರು ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ನಿದ್ರೆಗೆ ಜಾರಿರಿರುವ ಅಧಿಕಾರಿಗಳು ಗಮನ ಹರಿಸಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟನೆ ಮಾಡಿ ಗ್ರಾಮಸ್ಥರಿಗೆ ಕುಡಿಯುವ ನೀರಿನ ಭಾಗ್ಯವನ್ನು ಕಲ್ಪಿಸುವವರೇ ಕಾದು ನೋಡಬೇಕಿದೆ.