ನಂಜನಗೂಡು: ನಗರವನ್ನು ಗಾಂಜಾ ಹಾಗೂ ಮಾದಕ ವಸ್ತುಗಳ ಮುಕ್ತ ನಗರವನ್ನಾಗಿ ರೂಪಿಸುವ ಉದ್ದೇಶದಿಂದ ಬಿಜೆಪಿ ಯುವ ಮೋರ್ಚಾ ವತಿಯಿಂದ “ಗಾಂಜಾ ಮುಕ್ತ, ಸ್ವಚ್ಛ ನಂಜನಗೂಡು” ಎಂಬ ಘೋಷವಾಕ್ಯದೊಂದಿಗೆ ಮಾಜಿ ಶಾಸಕ ಬಿ. ಹರ್ಷವರ್ಧನ್ ನೇತೃತ್ವದಲ್ಲಿ ಗುರುವಾರ ಬೃಹತ್ ಬೈಕ್ ರ್ಯಾಲಿ ನಡೆಸಿ ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸಲಾಯಿತು.
ನಂಜನಗೂಡು ನಗರದ ಚಿಂತಾಮಣಿ ಗಣಪತಿ ದೇವಾಲಯದ ಬಳಿ ಆಯೋಜಿಸಿದ್ದ ಜನಜಾಗೃತಿ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಬಿ. ಹರ್ಷವರ್ಧನ್ ಚಾಲನೆ ನೀಡಿದರು. ಬಳಿಕ ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ಯುವಕರು ಬೈಕ್‌ಗಳಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಗಾಂಜಾ ಮತ್ತು ಡ್ರಗ್ಸ್ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬೈಕ್ ರ್ಯಾಲಿಯು ಆರ್.ಪಿ ರಸ್ತೆ, ಬಜಾರ್ ರಸ್ತೆ, ಹಾಗೂ ಎಂ.ಜಿ ರಸ್ತೆಯ ಮೂಲಕ ಹುಲ್ಲಹಳ್ಳಿ ವೃತ್ತದವರೆಗೆ ಸಾಗಿತು. ಮಾರ್ಗದುದ್ದಕ್ಕೂ ಸಾರ್ವಜನಿಕರಿಗೆ ಗಾಂಜಾ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು.
ಹುಲ್ಲಹಳ್ಳಿ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಮತ್ತು ತಾಲ್ಲೂಕು ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಬಿ. ಹರ್ಷವರ್ಧನ್, “ಗಾಂಜಾ ಮುಕ್ತ ನಂಜನಗೂಡು ನಿರ್ಮಿಸುವ ಉದ್ದೇಶದಿಂದ ಈ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಇತ್ತೀಚಿನ ದಿನಗಳಲ್ಲಿ ನಂಜನಗೂಡು ಭಾಗದಲ್ಲಿ ಗಾಂಜಾ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವಿಶೇಷವಾಗಿ ಯುವಜನತೆ ಮಾದಕ ವಸ್ತುಗಳ ಚಟಕ್ಕೆ ಒಳಗಾಗುತ್ತಿರುವುದು ಸಮಾಜದ ಭವಿಷ್ಯಕ್ಕೆ ಅಪಾಯಕಾರಿಯಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಗಾಂಜಾವನ್ನು ಯಾರು ಸರಬರಾಜು ಮಾಡುತ್ತಿದ್ದಾರೆ? ಮಾದಕ ವಸ್ತುಗಳು ಎಲ್ಲಿಂದ ಬರುತ್ತಿವೆ? ಇದರ ಹಿಂದೆ ಇರುವ ಜಾಲ ಯಾವುದು ಎಂಬ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
“ಮುಂಬೈ ಪೊಲೀಸರು ಬಂದು ಮೈಸೂರು ಭಾಗದಲ್ಲಿ ಪ್ರಕರಣಗಳನ್ನು ಪತ್ತೆಹಚ್ಚಿರುವ ಸಂದರ್ಭಗಳಿವೆ. ಆದರೆ ನಮ್ಮ ರಾಜ್ಯದ ಪೊಲೀಸ್ ಇಲಾಖೆ ಈ ಮಾದಕ ಜಾಲವನ್ನು ಸಂಪೂರ್ಣವಾಗಿ ಬೇರುಸಹಿತ ಕಿತ್ತೊಗೆಯಲು ಯಾವ ಕ್ರಮ ಕೈಗೊಂಡಿದೆ ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ” ಎಂದು ಪ್ರಶ್ನಿಸಿದರು.
ಗಾಂಜಾ ಮತ್ತು ಡ್ರಗ್ಸ್ ಕುರಿತು ಯಾವುದೇ ಮಾಹಿತಿ ದೊರೆತರೆ ಯುವಕರು ಹಾಗೂ ಸಾರ್ವಜನಿಕರು ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಹರ್ಷವರ್ಧನ್ ಮನವಿ ಮಾಡಿದರು.
“ಮದ್ಯಪಾನ ಮಾಡಿ ವಾಹನ ಚಲಾಯಿಸುವವರನ್ನು ತಪಾಸಣೆ ಮೂಲಕ ಪತ್ತೆಹಚ್ಚಬಹುದು. ಆದರೆ ಗಾಂಜಾ ಸೇವಿಸಿ ಸಮಾಜದಲ್ಲಿ ಸಂಚರಿಸುವವರನ್ನು ಪತ್ತೆಹಚ್ಚುವುದು ದೊಡ್ಡ ಸವಾಲಾಗಿದೆ. ಆದ್ದರಿಂದ ಮಾದಕ ವಸ್ತುಗಳ ಮಾರಾಟ ಮತ್ತು ಸರಬರಾಜಿನ ಮೂಲವನ್ನೇ ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದರು.
ಪೊಲೀಸ್ ಇಲಾಖೆ ಕೇವಲ ವಾಹನಗಳನ್ನು ತಡೆದು ದಂಡ ವಿಧಿಸುವುದು ಅಥವಾ ದಾಖಲೆ ಪರಿಶೀಲನೆಗೆ ಸೀಮಿತವಾಗದೆ, ಪರಿಣಾಮಕಾರಿ ಗಸ್ತು ಮತ್ತು ನಿರಂತರ ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟ ಜಾಲವನ್ನು ಸಂಪೂರ್ಣವಾಗಿ ನಿಗ್ರಹಿಸಬೇಕು ಎಂದು ಆಗ್ರಹಿಸಿದರು.
“ಗಾಂಜಾ ಮುಕ್ತ ನಂಜನಗೂಡು ನಿರ್ಮಾಣಕ್ಕಾಗಿ ಬಿಜೆಪಿ ಪಕ್ಷ ಸಂಪೂರ್ಣ ಸಹಕಾರ ನೀಡಲಿದೆ. ಯುವಕರ ಭವಿಷ್ಯದ ಬಗ್ಗೆ ಬಿಜೆಪಿ ಪಕ್ಷ ಗಂಭೀರವಾಗಿ ಚಿಂತನೆ ಮಾಡುತ್ತಿದೆ. ಮಾದಕ ವಸ್ತುಗಳ ವಿರುದ್ಧ ಹೋರಾಡುತ್ತಿರುವ ಪೊಲೀಸ್ ಇಲಾಖೆಯೊಂದಿಗೆ ನಾವು ಕೈಜೋಡಿಸುತ್ತೇವೆ” ಎಂದು ತಿಳಿಸಿದರು.
ಬಳಿಕ ಗಾಂಜಾ ಮತ್ತು ಮಾದಕ ವಸ್ತುಗಳ ಮಾರಾಟ ಜಾಲವನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಹಶೀಲ್ದಾರ್ ಗ್ರೇಡ್ 2 ನಂದಕಿಶೋರ್ ರವರಿಗೆ ಮನವಿ ಸಲ್ಲಿಸಲಾಯಿತು.
ಈ ಬೃಹತ್ ಬೈಕ್ ರ್ಯಾಲಿಯಲ್ಲಿ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಕೆಂಡಗಣ್ಣಪ್ಪ, ಬಿಜೆಪಿ ನಗರ ಅಧ್ಯಕ್ಷ ಸಿದ್ದರಾಜು, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಿದ್ದರಾಜು, ಮಾಜಿ ನಗರಸಭಾ ಅಧ್ಯಕ್ಷ ಮಹದೇವಸ್ವಾಮಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಅರ್ಜುನ್ ಪಾರ್ಥ, ಜಿಲ್ಲಾ ಉಸ್ತುವಾರಿ ಅರ್ಜುನ್ ರಮೇಶ್, ಬಿಜೆಪಿ ಮುಖಂಡರಾದ ಅನಂತ್, ಉಮೇಶ್ ಮೋದಿ ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು, ಯುವ ಮೋರ್ಚಾ ಪದಾಧಿಕಾರಿಗಳು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

