ನಂಜನಗೂಡು: ನಗರದ ಚಾಮಲಾಪುರದ ಗಂಗಾ ಮತಸ್ಥರ ಬೀದಿಯಲ್ಲಿ ಶ್ರೀ ಚಾಮುಂಡೇಶ್ವರಿ ಹಾಗೂ ಗಂಗಾಪರಮೇಶ್ವರಿ ಅಮ್ಮನವರ ದೇವಾಲಯದಲ್ಲಿ 51ನೇ ವರ್ಷದ ಶ್ರೀ ಗಂಗಾಪರಮೇಶ್ವರಿ ಅಮ್ಮನವರ ಪೂಜೆ ಮಹೋತ್ಸವವನ್ನು ಇಂದು ಭಾನುವಾರ ನಡೆಸಲಾಯಿತು.

ಶ್ರೀ ಪರಮರಾಮರೂಢ ಸ್ವಾಮಿಗಳು ಮತ್ತು ಶ್ರೀ ಶಾಂತಭೀಷ್ಮಚೌಡಯ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ನಂಜನಗೂಡಿನ ಕಪಿಲಾ ನದಿಯಲ್ಲಿ 108 ಕಳಸ ಪೂಜೆ ಮತ್ತು ಮಹಿಳೆಯರಿಂದ 108 ಕಳಸಗಳನ್ನು ರಾಜಭೀದಿಗಳಲ್ಲಿ ಹೊತ್ತು ಮೆರವಣಿಗೆ ಮಾಡಲಾಯಿತು. ನಂತರ ಶ್ರೀ ಗಂಗಾಪರಮೇಶ್ವರಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ ಮಾಡಿ ಅಲಂಕಾರ ಮತ್ತು ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ರವೀಂದ್ರ ಕುಮಾರ್, ಮಾಜಿ ನಗರಸಭಾ ಅಧ್ಯಕ್ಷ ಶ್ರೀನಿವಾಸ್, ನಗರಸಭಾ ಸದಸ್ಯರಾದ ಇಂದ್ರಣ್ಣ ವಸಂತಮ್ಮ, ಮಹದೇವ ಪ್ರಸಾದ್, ಯಜಮಾನರಾದ ಗೋವಿಂದಸ್ವಾಮಿ, ಸಿದ್ದು, ಅರ್ಚಕರಾದ ಶ್ರೀಕಂಠ ಪ್ರಸಾದ್ ಸೇರಿದಂತೆ ಹಲವರು ಭಾಗವಹಿಸಿದ್ದರು.