ನಂಜನಗೂಡು: ನಂಜನಗೂಡಿನ ಎಲ್ಲಾ ಬಡಾವಣೆಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ನಮ್ಮ ಕರ್ತವ್ಯವಾಗಿದೆ. ಬಡಾವಣೆಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ದರ್ಶನ್ ಧ್ರುವ ನಾರಾಯಣ್ ಹೇಳಿದರು.
ನಂಜನಗೂಡು ನಗರದ ಜುಬಿಲಿಯಂಟ್ ಲೇಔಟ್, ರಾಮಸ್ವಾಮಿ ಲೇಔಟ್ ಮೊದಲನೇ ಹಂತ, ನೀಲಾಂಬಿಕಾ ನಗರದ ಕಿತ್ತೂರು ರಾಣಿ ಚೆನ್ನಮ್ಮ ಮಾರ್ಗ ಮತ್ತು ಶ್ರೀ ಕಂಠೇಶ್ವರ ನಗರಗಳಲ್ಲಿ ಚರಂಡಿ ನಿರ್ಮಾಣ ಮತ್ತು ರಸ್ತೆ ಸಮತಟ್ಟು ಕಾಮಗಾರಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕರು ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿಯಲ್ಲಿ ನಂಜನಗೂಡು ನಗರದ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದೇವೆ. ಅದರಲ್ಲಿ ಇಂದು 4.16 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ್ದೇವೆ.
ಮೊದಲನೇ ಹಂತದಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ನಡೆಯಲಿದೆ. ನಗರದ ವಿವಿಧ ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಈ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕರು ತಿಳಿಸಿದರು.
ನಂಜನಗೂಡು ನಗರದ ಅಭಿವೃದ್ಧಿಗೆ ಒಟ್ಟು 10 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದ್ದೇವೆ. ಬಡಾವಣೆಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಹಂತ ಹಂತವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಬಡಾವಣೆಗಳ ನಿವಾಸಿಗಳು ನಮಗೆ ಸಹಕಾರ ನೀಡಬೇಕು. ನನಗೆ ಸಾಕಷ್ಟು ಸಮಯ ಕೊಡಿ, ಇನ್ನಷ್ಟು ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದರು. 25 ವರ್ಷಗಳಿಂದ ಜುಬಿಲೆಂಟ್ ಬಡಾವಣೆಯಲ್ಲಿ ವಾಸವಿದ್ದೇವೆ, ನಮಗೆ ಮೂಲ ಸೌಕರ್ಯ ಇಲ್ಲ. ಯುಜಿಡಿ ಸಮಸ್ಯೆ ಬಗೆಹರಿಸಿ, ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಸಿ ಎಂದು ನಿವಾಸಿಗಳು ಮನವಿ ಮಾಡಿದರು. ಸ್ಥಳೀಯರಿಂದ ಅಹವಾಲು ಸ್ವೀಕರಿಸಿದ ಶಾಸಕರು, ಸ್ಥಳದಲ್ಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರ ಬ್ಲಾಕ್ ಅಧ್ಯಕ್ಷ ಸಿ.ಎಂ. ಶಂಕರ್, ನಗರಸಭಾ ಪೌರಾಯುಕ್ತ ಬಸವರಾಜ್, ಬಸವೇಗೌಡ, ಮಾಜಿ ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ, ರವಿಪ್ರಕಾಶ್, ಗೋವಿಂದರಾಜ್, ಮಹೇಶ್, ಗಾಯತ್ರಿ ಮೋಹನ್, ಸೌಭಾಗ್ಯ, ಯೋಗೀಶ್, ಗಂಗಾಧರ್, ಗುರುಮಲ್ಲಪ್ಪ, ರಮೇಶ್, ಮಲ್ಕುಂಡಿ ಪುಟ್ಟಸ್ವಾಮಿ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
ನಂಜನಗೂಡು ನಗರದಲ್ಲಿ 22 ಕೋಟಿ ರೂ. ವೆಚ್ಚದಲ್ಲಿ ಯುಜಿಡಿ ಕಾಮಗಾರಿ ನಡೆಯುತ್ತಿದೆ. ಯುಜಿಡಿ ಸಮಸ್ಯೆಯನ್ನು ಬಗೆಹರಿಸಲು ನಗರ ಸಭೆ ಮುಂದಾಗಿದೆ. ಕೊಳಚೆ ನೀರು ಹರಿದು ಹೋಗಲು ವ್ಯವಸ್ಥಿತವಾಗಿ ಕಾಮಗಾರಿ ನಡೆಸಲಾಗುತ್ತಿದೆ. ಪಟ್ಟಣದಿಂದ ಮಹದೇವ ನಗರದ ವರೆಗೆ ಯುಜಿಡಿ ಕಾಮಗಾರಿ ನಡೆಯುತ್ತಿದೆ ಇದರಿಂದ ನಗರದ ಎಲ್ಲಾ ಬಡಾವಣೆಗಳಿಗೂ ಅನುಕೂಲವಾಗಲಿದೆ.
-ಬಸವರಾಜು ನಂಜನಗೂಡು ನಗರಸಭಾ ಆಯುಕ್ತ.

