ನಂಜನಗೂಡು: ಕಾಯಕ ಮತ್ತು ದಾಸೋಹದ ಮಹತ್ವವನ್ನು ಸಾರಿದ್ದು ಬಸವಣ್ಣನವರು, ಅವರ ಸಮ ಸಮಾಜದ ನಿರ್ಮಾಣದ ಕನಸು ಇನ್ನು ನನಸಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ನಂಜನಗೂಡು ತಾಲೂಕಿನ ದೇವನೂರು ಗ್ರಾಮದಲ್ಲಿ ಶ್ರೀ ಗುರುಮಲ್ಲೇಶ್ವರ ಮಹಾ ಸಂಸ್ಥಾನ ದಾಸೋಹ ಮಠದಲ್ಲಿ ಶ್ರೀ ಗುರು ಮಲ್ಲೇಶ್ವರರ 127ನೇ ಪುಣ್ಯರಾಧನೆ ಅಂಗವಾಗಿ ನೂತನವಾಗಿ ನಿರ್ಮಿಸಿರುವ ಬಸವ ಮಹಾದ್ವಾರ ಮತ್ತು ಕಲ್ಯಾಣಿ ಉದ್ಘಾಟನೆಯನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಮತ್ತು ಸಿದ್ದಗಂಗಾ ಶ್ರೀ ಸಿದ್ದಲಿಂಗ ಸ್ವಾಮಿಗಳು ಉದ್ಘಾಟಿಸಿದರು.
ನಂತರ ವೇದಿಕೆ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶ್ರೀ ಗುರುಮಲ್ಲೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಕೂಡ ಬಸವಣ್ಣನವರ ಅನುಯಾಯಿ, ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಬಸವಣ್ಣನವರ ಜಯಂತಿ ದಿನವೇ ನಾನು ಪ್ರಮಾಣವಚನ ಸ್ವೀಕಾರ ಮಾಡಿದ್ದೆ.
ಎಲ್ಲ ಸರ್ಕಾರಿ ಕಛೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಇರುವಂತೆ ಆದೇಶ ಮಾಡಿದ್ದೆ. 12ನೇ ಶತಮಾನದಿಂದಲೂ ಇಲ್ಲಿಯ ತನಕ ಸಾಕಷ್ಟು ಬದಲಾವಣೆ ಕಂಡಿದೆ. ಆದರೆ, ಬಸವದಿ ಶರಣರ ಕನಸು ಇನ್ನು ನನಸಾಗಿಲ್ಲ. ಎಲ್ಲರನ್ನೂ ನಾವು ಮನುಷ್ಯರನ್ನಾಗಿ ನೋಡಬೇಕು. ಜಾತಿ ಮತ್ತು ಅಂತಸ್ತಿನ ತಾರತಮ್ಯ ಇರಬಾರದು ಎಂದು ಬಸವದಿ ಶರಣರು ಕನಸು ಕಂಡಿದ್ದರು. ಸಮಾಜದಲ್ಲಿ ಮನುಷ್ಯರಾಗಿ ಬದುಕುವ ಪ್ರಯತ್ನ ಮಾಡಬೇಕು.
ದೇವನೂರು ಶ್ರೀ ಗುರು ಮಲ್ಲೇಶ್ವರರ ಪ್ರೇರಣೆ ಮತ್ತು ಅವರ ಕಾಯಕದಿಂದ ದಾಸೋಹ ಮಾಡಿ, ಹಸಿದವರಿಗೆ ಅನ್ನ ಹಾಕಿ ಹೊಟ್ಟೆ ತುಂಬಿಸುತ್ತಿದ್ದರು. ಕಂತೆ ಭಿಕ್ಷೆ ಬೇಡಿ ದಾಸೋಹ ಮಾಡಿದ ಶ್ರೀ ಗುರುಮಲ್ಲೇಶ್ವರವರ ದಾಸೋಹ ಸೇವೆ ಅವಿಸ್ಮರಣೀಯ. ಶ್ರೀ ಗುರುಮಲ್ಲೇಶ್ವರರ ಹೆಸರಿನಲ್ಲಿ ಶಿಕ್ಷಣ, ದಾಸೋಹ ನೀಡಿ ಗ್ರಾಮೀಣ ಜನತೆಗೆ ಅನುಕೂಲವಾಗಿದೆ. ಬಡ ಜನರಿಗೂ ಶಿಕ್ಷಣ ತಲುಪುವಂತವಾಗಬೇಕು. ವೈಜ್ಞಾನಿಕ ಮತ್ತು ವೈಚಾರಿಕ ಶಿಕ್ಷಣವನ್ನು ನೀಡಬೇಕು ಎಂದು ಸಲಹೆ ನೀಡಿದರು.
ಈ ಹಿಂದೆ ವರ್ಣಾಶ್ರಮ ವ್ಯವಸ್ಥೆಯಿಂದ ಅಕ್ಷರದಿಂದ ವಂಚಿತರಾಗಿದ್ದರು. ಮೌಢ್ಯತೆ ವಿರುದ್ಧ ಬಸವದಿ ಶರಣರು ಹೋರಾಟ ನಡೆಸಿದ್ದರು. ಬಸವಾದಿ ಶರಣರ ಪ್ರೇರಣೆಯಿಂದ ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮೌಡ್ಯ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದ್ದೆ. ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರು ಹೇಳಿದಂತೆ ತಮ್ಮ ತಮ್ಮ ಇತಿಹಾಸವನ್ನು ತಿಳಿದುಕೊಳ್ಳಬೇಕು. ಸಂವಿಧಾನ ಬಂದಮೇಲೆ ಎಲ್ಲರಿಗೂ ಸಮಾನ ಅವಕಾಶ ಸಿಕ್ಕಿದೆ. ಅಂಬೇಡ್ಕರ್ ಅವರ ಸಂವಿಧಾನದಿಂದ ನಾನು ಕೂಡ ಮುಖ್ಯಮಂತ್ರಿಯಾಗಿದ್ದೆ, ಶಿಕ್ಷಣ ಇಲ್ಲದೆ ಪ್ರಗತಿ ಸಾಧಿಸಲು ಸಾಧ್ಯವಿಲ್ಲ.
ಶಿಕ್ಷಣ ಪಡೆದು ಅಧಿಕಾರವನ್ನು ಪಡೆದುಕೊಂಡಿರುವ ವಿದ್ಯಾವಂತ ಸಮಾಜ ಮೌಢ್ಯಾಚರಣೆ ಮಾಡುತ್ತಿರುವುದು ದುರಂತ. ಬಸವಾದಿ ಶರಣರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡಾಗ ಮಾತ್ರ ಬಸವಣ್ಣನವರ ನನಸಾಗಲಿದೆ. ಬಸವಣ್ಣನವರ ಪ್ರೇರಣೆಯಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಅದರಂತೆ ಶರಣರು ಬಿತ್ತದೆ ಬೆಳೆಯದೆ ಉತ್ಪಾದನೆ ಮಾಡುವುದು ಶರಣರು ಮಾತ್ರ. ಭಿಕ್ಷೆ ಮಾಡಿ ಊಟ ಬಡಿಸುವುದು ಬಹು ದೊಡ್ಡ ಕೆಲಸವಾಗಿದೆ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಮಾತನಾಡಿದರು. ಸೋಮಹಳ್ಳಿ ಮಠದ ಶ್ರೀ ಸಿದ್ದಮಲ್ಲ ಸ್ವಾಮಿಗಳು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಶಾಸಕರಾದ ದರ್ಶನ್ ಧ್ರುವನಾರಾಯಣ್, ಗಣೇಶ್ ಪ್ರಸಾದ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕರ್ನಾಟಕ ಮೃಗಾಲಯದ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ಕಾಡ ಅಧ್ಯಕ್ಷ ಪಿ.ಮರಿಸ್ವಾಮಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್ ಸಿ ಬಸವರಾಜು, ಕಾಂಗ್ರೆಸ್ ಮುಖಂಡರಾದ ಬುಲೆಟ್ ಮಹಾದೇವಪ್ಪ, ಇಂಧನ್ ಬಾಬು, ಪ್ರೊ. ಡಿಎಸ್ ಸದಾಶಿವ ಮೂರ್ತಿ, ಶ್ರೀ ಗುರು ಮಲ್ಲೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಡಾ. ಡಿ.ಎಸ್ ಗುರು, ಉಪಾಧ್ಯಕ್ಷ ಜಿ.ರಾಜೇಶ್, ಕಾರ್ಯದರ್ಶಿ ವೃಷಬೇಂದ್ರ, ಡಿಜೆ ಗುರು ಸೇರಿದಂತೆ ಹಲವರು ಹಾಜರಿದ್ದರು.
ಈಗ ನಾನು ಮುಖ್ಯಮಂತ್ರಿ ಅಲ್ಲ, ಮಾಜಿ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಅಭಿಮಾನಿ ಕೂಗಿದ ಕೂಗಿಗೆ ಪ್ರತಿಕ್ರಿಯಿಸಿದರು. ವೇದಿಕೆಯಲ್ಲಿ ಭಾಷಣ ಮಾಡಲು ಬಂದ ಸಿದ್ದರಾಮಯ್ಯರವರನ್ನು ಕಂಡ ಅಭಿಮಾನಿಯೊಬ್ಬ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಜಯವಾಗಲಿ ಎಂದು ಘೋಷಣೆ ಕೂಗಿದ್ದ. ಇದನ್ನು ಕೇಳಿದ ಮಾಜಿ ಸಿಎಂ, ಈಗ ನಾನು ಮುಖ್ಯಮಂತ್ರಿ ಅಲ್ಲ, ಮಾಜಿ ಮುಖ್ಯಮಂತ್ರಿ. ನಾನು ಮಾತು ಕೊಟ್ಟಿದ್ದೆ, ರಾಹುಲ್ ಗಾಂಧಿ ಅವರು ಹೇಳಿದ ಮೇಲೆ ಮರು ಮಾತನಾಡದೆ ರಾಜೀನಾಮೆ ಕೊಟ್ಟು ಹೊರಗಡೆ ಬಂದಿದ್ದೇನೆ. ಮಾಜಿ ಮುಖ್ಯಮಂತ್ರಿ ಯಾಗಿ ನಿಮ್ಮ ಮುಂದೆ ನಿಂತಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

