ಮೈಸೂರು: ಜಯದೇವ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಒಂದೇ ದಿನದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮೃತರ ಕುಟುಂಬಸ್ಥರು ಬುಧವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ರಾತ್ರಿ ವೈದ್ಯರೂ ಇರಲಿಲ್ಲ. ಸರಿಯಾದ ಮಾಹಿತಿಯೂ ನೀಡುವುದಿಲ್ಲ. ಅವರ ನಿರ್ಲಕ್ಷ್ಯದಿಂದ ಸಾವಾಗುತ್ತಿದೆ’ ಎಂದು ಆರೋಪಿಸಿದರು. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ವಿ.ವಿ ಪುರಂ ಪೊಲೀಸರು ಆಗಮಿಸಿ, ಕುಟುಂಬಸ್ಥರನ್ನು ಸಮಾಧಾನಪಡಿಸಿದರು.
ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಹಾಗೂ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ದಿನೇಶ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಮೆಡಿಕಲ್ ಸೂಪರಿಟೆಂಡೆಂಟ್ ಡಾ.ಕೆ.ಎಸ್.ಸದಾನಂದ ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
‘ಸಮಯ ಮೀರಿ ಬಂದ ಕಾರಣ ರೋಗಿಗಳು ಮೃತಪಟ್ಟಿದ್ದಾರೆ. ನಿತ್ಯ ಇದೇ ಪ್ರಮಾಣದಲ್ಲಿ ಮೃತರಾಗುತ್ತಿದ್ದಾರೆ. ಆರೋಪ ಮಾಡುತ್ತಿರುವವರೂ ರೋಗಿಯನ್ನು 12 ಗಂಟೆ ತಡವಾಗಿ ಕರೆತಂದಿದ್ದರು. ರಾತ್ರಿ ಮೂವರು ವೈದ್ಯರು ಇದ್ದರು. ಎಲ್ಲಾ ರೋಗಿಗಳನ್ನೂ ಆರೈಕೆ ಮಾಡಿದ್ದಾರೆ. ಆ ಕುರಿತ ಸಿಸಿ ಟಿವಿ ದೃಶ್ಯಗಳು ಇವೆ’ ಎಂದು ತಿಳಿಸಿದರು.

