ನವದೆಹಲಿ: ನವೆಂಬರ್‌ 12ರಿಂದ ವಿಸ್ತಾರ ಏರ್‌ಲೈನ್ಸ್‌ ವಿಮಾನ ಸಂಸ್ಥೆಯು ಏರ್ ಇಂಡಿಯಾದೊಂದಿಗೆ ವಿಲೀನಗೊಳ್ಳಲಿದೆ. ವಿಸ್ತಾರ ಎನ್ನುವ ಬ್ರಾಂಡ್‌ನಡಿ ನವೆಂಬರ್ 11ರಂದು ಕೊನೆಯ ಬಾರಿಗೆ ವಿಮಾನ ಕಾರ್ಯಾಚರಣೆ ನಡೆಸಲಿದೆ.

ವಿಸ್ತಾರ ಏರ್‌ಲೈನ್ಸ್‌ ಸಂಸ್ಥೆಯು ಟಾಟಾ ಸಮೂಹ ಹಾಗೂ ಸಿಂಗಪುರ ಏರ್‌ಲೈನ್ಸ್‌ನ ಜಂಟಿ ಮಾಲೀಕತ್ವದಲ್ಲಿದೆ.

ಏರ್‌ ಇಂಡಿಯಾದೊಂದಿಗೆ ವಿಲೀನಗೊಳ್ಳಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ‘ವಿಸ್ತಾರ ಏರ್‌ಲೈನ್ಸ್‌ನಲ್ಲಿ ನವೆಂಬರ್ 12 ಅಥವಾ ಅದರ ನಂತರ ದಿನಗಳಿಗೆ ಮುಂಗಡ ಬುಕ್ಕಿಂಗ್‌ ಸ್ವೀಕರಿಸಲಾಗುವುದಿಲ್ಲ. ಆ ಬಳಿಕ ಏರ್‌ ಇಂಡಿಯಾವು ಈ ವಿಮಾನಗಳ ನಿರ್ವಹಣೆ ಮಾಡಲಿದ್ದು, ವಿಸ್ತಾರ ಕಾರ್ಯಾಚರಿಸುತ್ತಿದ್ದ ವಿಮಾನ ಮಾರ್ಗಗಳ ಬುಕ್ಕಿಂಗ್‌ಗಳನ್ನು ಏರ್ ಇಂಡಿಯಾ ವೆಬ್‌ಸೈಟ್‌ಗೆ ಮರುನಿರ್ದೇಶಿಸಲಾಗುತ್ತದೆ. ನವೆಂಬರ್‌ 11ರವರೆಗೆ ಎಂದಿನಂತೆ ವಿಸ್ತಾರದ ಕಾರ್ಯಾಚರಣೆ ಇರಲಿದೆ’ ಎಂದು ವಿಸ್ತಾರ ‍ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.
2022ರ ನವೆಂಬರ್‌ನಲ್ಲಿ ವಿಸ್ತಾರ- ಏರ್‌ ಇಂಡಿಯಾ ವಿಲೀನದ ಬಗ್ಗೆ ಘೋಷಿಸಲಾಗಿತ್ತು. ವಿಲೀನದ ಬಳಿಕ ಸಿಂಗಪುರ ಏರ್‌ಲೈನ್ಸ್ ಸಂಸ್ಥೆಯು ಏರ್‌ ಇಂಡಿಯಾದಲ್ಲಿ ಶೇ 25.1ರಷ್ಟು ಪಾಲು ಹೊಂದಿರಲಿದೆ.ಸದ್ಯ ಏರ್‌ ಇಂಡಿಯಾ ಸಂಸ್ಥೆಯು ಟಾಟಾ ಸಮೂಹದ ಒಡೆತನದಲ್ಲಿದೆ.