ದಿ ಸೆಂಟ್ರಲ್ ಅರೆಕಾನಟ್ ಅಂಡ್ ಕೋಕ್ಕೊ ಮಾರ್ಕೆಟಿಂಗ್ ಅಂಡ್ ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್ (ಕ್ಯಾಂಪ್ಕೊ) ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್.ಆರ್. ಸತೀಶ್ಚಂದ್ರ ಅವರು, ಕರ್ನಾಟಕ ಸರ್ಕಾರವು ದಿನಾಂಕ 10.08.2026ರಂದು ಹೊರಡಿಸಿದ ಅಧಿಸೂಚನೆ ಹಾಗೂ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತರ ಕಚೇರಿಯು ದಿನಾಂಕ 12.08.2026ರಂದು ಹೊರಡಿಸಿದ, ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ನಿಷೇಧ ಕುರಿತ ಪ್ರಕಟಣೆಯನ್ನು ಗಂಭೀರವಾಗಿ ಗಮನಿಸಿದ ಅವರು ಅಡಿಕೆ ಬೆಳೆಗಾರರು ಬಲಿಪಶು ಆಗದಂತೆ ತಂಬಾಕು ನಿಷೇಧ ಜಾರಿಯಲ್ಲಿ ಸ್ಪಷ್ಟ ಚೌಕಟ್ಟು ರಚಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ, ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ವಿರುದ್ಧ ಕಠಿಣ ಜಾರಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ತಿಳಿಸಿದೆ. ಗುಟ್ಕಾ, ಪಾನ್ ಮಸಾಲ ಹಾಗೂ ಇತರ ನಿಷೇಧಿತ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ಸಾಗಾಣಿಕೆ, ವಿತರಣೆ ಮತ್ತು ಮಾರಾಟದ ವಿರುದ್ಧ ವಿಶೇಷ ತಪಾಸಣೆಗಳನ್ನು ಈ ಕ್ರಮ ಒಳಗೊಂಡಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ರ ಕಲಂ 30(2)(ಎ) ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಮಾರಾಟದ ಮೇಲಿನ ನಿಷೇಧ ಮತ್ತು ನಿರ್ಬಂಧಗಳು) ನಿಯಮಾವಳಿ 2011ರ ನಿಯಮ 2.3.4ನ್ನು ಆಧರಿಸಿ, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕರ್ನಾಟಕ ರಾಜ್ಯದಾದ್ಯಂತ ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಿ ಸರ್ಕಾರಿ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. ಈ ಅಧಿಸೂಚನೆಯು ಹೊರಡಿಸಿದ ದಿನಾಂಕದಿಂದ ಒಂದು ವರ್ಷದ ಅವಧಿಗೆ ರಾಜ್ಯದಾದ್ಯಂತ ಜಾರಿಯಲ್ಲಿರುತ್ತದೆ.
ಸಾರ್ವಜನಿಕ ಆರೋಗ್ಯ ಸಂರಕ್ಷಣೆಯ ಸರ್ಕಾರದ ಉದ್ದೇಶವನ್ನು ಕ್ಯಾಂಪ್ಕೊ ಗೌರವಿಸುತ್ತದೆ ಹಾಗೂ ನಿಷೇಧಿತ ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ವಿರುದ್ಧ ಪರಿಣಾಮಕಾರಿ ಜಾರಿ ಕ್ರಮದ ಅಗತ್ಯವನ್ನೂ ಒಪ್ಪಿಕೊಳ್ಳುತ್ತದೆ. ಆದರೆ ಅದೇ ಸಮಯದಲ್ಲಿ, ಈ ಅಧಿಸೂಚನೆಯ ಜಾರಿಯು ಅಡಿಕೆ ಬೆಳೆಗಾರರ ಹಾಗೂ ಕಾನೂನುಬದ್ಧ ಅಡಿಕೆ ವ್ಯಾಪಾರದ ಹಿತಾಸಕ್ತಿಗಳಿಗೆ ಯಾವುದೇ ರೀತಿಯಲ್ಲಿ ಧಕ್ಕೆ ಉಂಟುಮಾಡದಂತೆ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕೆಂದು ಕ್ಯಾಂಪ್ಕೊ ಸಂಸ್ಥೆಯು ಒತ್ತಾಯಪೂರ್ವಕವಾಗಿ ಆಗ್ರಹಿಸುತ್ತದೆ.
ಈ ಕುರಿತು ಮಾತನಾಡಿದ ಕ್ಯಾಂಪ್ಕೊ ಅಧ್ಯಕ್ಷರಾದ ಶ್ರೀ ಎಸ್.ಆರ್. ಸತೀಶ್ಚಂದ್ರ ಅವರು, “ಅಡಿಕೆಯು ಕರ್ನಾಟಕ ಮತ್ತು ದೇಶದ ಇತರ ಭಾಗಗಳ ಅಸಂಖ್ಯಾತ ರೈತರ ಜೀವನೋಪಾಯಕ್ಕೆ ಆಧಾರವಾಗಿರುವ ಪ್ರಮುಖ ತೋಟಗಾರಿಕಾ ಬೆಳೆಯಾಗಿದೆ. ಸರ್ಕಾರದ ಸಾರ್ವಜನಿಕ ಆರೋಗ್ಯ ಉದ್ದೇಶ ಹಾಗೂ ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ವಿರುದ್ಧದ ಕ್ರಮವನ್ನು ಕ್ಯಾಂಪ್ಕೊ ಗೌರವಿಸುತ್ತದೆ. ಆದರೆ, ಒಂದು ಕೃಷಿ ಉತ್ಪನ್ನವಾಗಿ ಅಡಿಕೆ ಹಾಗೂ ತಂಬಾಕು-ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ನಡುವೆ ಸ್ಪಷ್ಟ ವ್ಯತ್ಯಾಸವಿರಬೇಕು.
ಈ ಅಧಿಸೂಚನೆಯ ಜಾರಿ ಕ್ರಮವು ನಿಷೇಧಿತ ಉತ್ಪನ್ನಗಳಿಗೆ ಮಾತ್ರ ಸೀಮಿತವಾಗಿರತಕ್ಕದ್ದೇ ಹೊರತು, ಅಡಿಕೆ ಬೆಳೆಗಾರರಿಗೆ ಅಥವಾ ಕಾನೂನುಬದ್ಧ ಅಡಿಕೆ ವ್ಯಾಪಾರಕ್ಕೆ ಯಾವುದೇ ಅನಪೇಕ್ಷಿತ ಪರಿಣಾಮ ಬೀರಬಾರದು.” ಎಂಬ ಆಗ್ರಹವನ್ನು ಮಾಡಿದ್ದಾರೆ. ಅಡಿಕೆ ಬೆಳೆಗಾರರು ತಮ್ಮ ಕೃಷಿ ಉತ್ಪನ್ನದ ದುರ್ಬಳಕೆ ಅಥವಾ ಇತರರಿಂದ ಆಗುವ ಬಳಕೆಯ ಪರಿಣಾಮಗಳಿಗೆ ಹೊಣೆಗಾರರಾಗಬಾರದು ಎಂದು ಅಧ್ಯಕ್ಷರು ಮತ್ತಷ್ಟು ಸ್ಪಷ್ಟಪಡಿಸಿದರು.
ಅಡಿಕೆ ವಲಯವು ಕರ್ನಾಟಕದ ಆರ್ಥಿಕತೆಗೆ ನೀಡುತ್ತಿರುವ ಗಣನೀಯ ಕೊಡುಗೆಯು ಸಂಸತ್ತಿನ ಮುಂದೆ ಮಂಡಿಸಲಾದ ಮಾಹಿತಿಯಲ್ಲಿಯೂ ಪ್ರತಿಫಲಿಸುತ್ತದೆ. ಲೋಕಸಭೆಯ ಸಂಸದ ಶ್ರೀ ಬಿ.ವೈ. ರಾಘವೇಂದ್ರ ಅವರು ಎತ್ತಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವರಾದ ಶ್ರೀ ಪಂಕಜ್ ಚೌಧರಿ ಅವರು, ಈ ಅಂಕಿ-ಅಂಶಗಳು ಒಳಗೊಂಡಿರುವ ಅವಧಿಯಲ್ಲಿ ಅಡಿಕೆ ಮತ್ತು ಅಡಿಕೆ ಆಧಾರಿತ ಉತ್ಪನ್ನಗಳ ಮಾರಾಟದಿಂದ ರಾಜ್ಯವಾರು ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹಿಸಿದ ರಾಜ್ಯ ಕರ್ನಾಟಕವಾಗಿದೆ ಎಂದು ತಿಳಿಸಿದ್ದಾರೆ.
ಹಣಕಾಸು ಸಚಿವಾಲಯ ನೀಡಿರುವ ವರದಿಯ ಪ್ರಕಾರ, ಕರ್ನಾಟಕದಲ್ಲಿ ಅಡಿಕೆ ಸಂಬಂಧಿತ ಜಿಎಸ್‌ಟಿ ಸಂಗ್ರಹ 2021-22ನೇ ಹಣಕಾಸು ವರ್ಷದಲ್ಲಿ ₹172.62 ಕೋಟಿ, 2022-23ನೇ ಸಾಲಿನಲ್ಲಿ ₹266.82 ಕೋಟಿ, 2023-24ನೇ ಸಾಲಿನಲ್ಲಿ ₹326.57 ಕೋಟಿ, 2024-25ನೇ ಸಾಲಿನಲ್ಲಿ ₹313.16 ಕೋಟಿ ಹಾಗೂ 2025-26ನೇ ಸಾಲಿನಲ್ಲಿ ₹379.34 ಕೋಟಿಗಳಷ್ಟಿತ್ತು. ಇದಲ್ಲದೆ, 2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕರ್ನಾಟಕ ₹90.21 ಕೋಟಿ ಅಡಿಕೆ ಸಂಬಂಧಿತ ಜಿಎಸ್‌ಟಿ ಸಂಗ್ರಹಿಸಿದೆ.
ಈ ಅಂಕಿ-ಅಂಶಗಳು ಕರ್ನಾಟಕದಲ್ಲಿ ಅಡಿಕೆ ಹಾಗೂ ಅಡಿಕೆ ಆಧಾರಿತ ವ್ಯಾಪಾರದ ಗಣನೀಯ ಆರ್ಥಿಕ ಮಹತ್ವವನ್ನು ಒತ್ತಿಹೇಳುತ್ತವೆ ಹಾಗೂ ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ವಿರುದ್ಧದ ಜಾರಿ ಕ್ರಮಗಳು ಕಾನೂನುಬದ್ಧ ಅಡಿಕೆ ವ್ಯಾಪಾರ ಅಥವಾ ಅಡಿಕೆ ಬೆಳೆಗಾರರ ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರದಂತೆ ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಬಲಪಡಿಸುತ್ತವೆ.
ಅಡಿಕೆಯ ಕೃಷಿ ಹಾಗೂ ಅದರ ಕಾನೂನುಬದ್ಧ ಮಾರುಕಟ್ಟೆ ಚಟುವಟಿಕೆಯಲ್ಲಿ ತೊಡಗಿರುವ ರೈತರ ಹಿತಾಸಕ್ತಿಗಳನ್ನು, ಸಾರ್ವಜನಿಕ ಆರೋಗ್ಯ ಕ್ರಮಗಳ ಅನುಷ್ಠಾನದ ಸಂದರ್ಭದಲ್ಲಿಯೂ ಸಮರ್ಪಕವಾಗಿ ಸಂರಕ್ಷಿಸಬೇಕಿದೆ ಈ ನಿಟ್ಟಿನಲ್ಲಿ, ನಿಷೇಧದ ಜಾರಿಯು ಅಧಿಸೂಚನೆಯಲ್ಲಿ ಒಳಗೊಂಡಿರುವ ಉತ್ಪನ್ನಗಳಿಗೆ ಮಾತ್ರ ಸೀಮಿತವಾಗಿರಬೇಕು ಹಾಗೂ ಅಡಿಕೆಯ ಕೃಷಿ ಉತ್ಪನ್ನದ ಸ್ಥಾನಮಾನ, ಅದರ ಕಾನೂನುಬದ್ಧ ಬೆಳೆಯುವಿಕೆ, ಸಂಗ್ರಹಣೆ, ಸಂಸ್ಕರಣೆ ಮತ್ತು ವ್ಯಾಪಾರದ ಮೇಲೆ ಯಾವುದೇ ಪರೋಕ್ಷ ನಿರ್ಬಂಧ ಉಂಟಾಗದಂತೆ ಖಚಿತಪಡಿಸಿಕೊಳ್ಳಬೇಕೆಂದು ಕ್ಯಾಂಪ್ಕೊ ಸರ್ಕಾರ ಹಾಗೂ ಜಾರಿ ಅಧಿಕಾರಿಗಳಲ್ಲಿ ದೃಢವಾಗಿ ಆಗ್ರಹಿಸುತ್ತದೆ.
ಅಧಿಸೂಚನೆಯ ಅನುಷ್ಠಾನದ ಸಂದರ್ಭದಲ್ಲಿ ಕಾನೂನುಬದ್ಧ ವ್ಯಾಪಾರಸ್ಥರಿಗೆ ಹಾಗೂ ಅಡಿಕೆ ಬೆಳೆಗಾರರಿಗೆ ಅನಗತ್ಯ ತೊಂದರೆ ಅಥವಾ ಗೊಂದಲ ಉಂಟಾಗದಂತೆ, ಸ್ಪಷ್ಟ ಮತ್ತು ನಿಸ್ಸಂದಿಗ್ಧ ಜಾರಿ ಚೌಕಟ್ಟನ್ನು ರೂಪಿಸಬೇಕೆಂದೂ ಕ್ಯಾಂಪ್ಕೊ ಸಂಸ್ಥೆಯು ಸರ್ಕಾರವನ್ನು ಒತ್ತಾಯಿಸುತ್ತದೆ.

