ಕಳೆದ ವಾರ ಇಳಿಕೆ ಕಂಡಿದ್ದ ಟೊಮೆಟೋ ಬೆಲೆ ಮತ್ತೆ ಕೊಂಚ ಏರಿಕೆ ಕಂಡಿದೆ. ಟೊಮೆಟೋ ಬೆಲೆ ಒಂದು ಕೆಜಿಗೆ ರೂ70 ರಿಂದ ರೂ 90 ವರೆಗೆ ಮಾರಾಟವಾಗುತ್ತಿದೆ. ಟೊಮೆಟೋ ಹೊರತಾಗಿ ಎಲ್ಲ ಬಗೆಯ ತರಕಾರಿಗಳ ಬೆಲೆಯೂ ಏರಿಕೆಯಾಗಿದೆ.

ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಚಿಕ್ಕಬಳ್ಳಾಪುರ ಎಪಿಎಂಸಿಯಲ್ಲಿ ಟೊಮೆಟೊ ಬೆಲೆ ಮತ್ತೆ ಏರಿಕೆಯಾಗಿದೆ. ಕಳೆದ ಒಂದು ವಾರದ ವರೆಗೂ 14 ಕೆಜಿ ತೂಕದ ಒಂದು ಬಾಕ್ಸ್ ಟೊಮೆಟೊ ಬೆಲೆ 1000 ದಿಂದ 1300ವರೆಗೂ ಗಡಿ ದಾಟಿತ್ತು.

ಈ ವಾರ 14 ಕೆಜಿ ತೂಕದ ಒಂದು ಬಾಕ್ಸ್ ಬೆಲೆ 100 ರಿಂದ 300 ರೂಪಾಯಿಗೆ ಕುಸಿತಗೊಂಡಿದ್ದು ರೈತರಿಗೆ ಭಾರೀ‌ ನಿರಾಸೆ ಉಂಟಾಗಿತ್ತು. ಇದೀಗ ಟೊಮೊಟೊ ಬೆಲೆಯಲ್ಲಿ ಮತ್ತೆ ಚೇತರಿಕೆ ಕಂಡಿದ್ದು, ಕನಿಷ್ಟ 200 ರೂ ಹಾಗೂ ಗರಿಷ್ಠ 600 ರೂಪಾಯಿ ವರೆಗೆ ಟೊಮೆಟೋ ಮಾರಾಟವಾಗುತ್ತಿದೆ.

ಎರಡು ತಿಂಗಳು ರಾಜ್ಯಾದ್ಯಂತ ಸಾಕಷ್ಟು ಮಳೆ ಬಿದ್ದ ಪರಿಣಾಮ ತರಕಾರಿ ಬೆಳೆಗಳು ಹಾಳಾಗಿದ್ದು, ಹೆಚ್ಚಿನ ತರಕಾರಿ ಬೆಲೆ ಏರುಗತಿಯಲ್ಲೇ ಇದೆ. ಸದಾ ರೂ 20ರಿಂದ 30ರ ಆಸುಪಾಸಿನಲ್ಲಿರುತ್ತಿದ್ದ ಬೀಟ್‌ರೂಟ್‌ ದರ ಇದೀಗ 60 ರೂ.ಗೆ ಏರಿಕೆಯಾಗಿದೆ. ಕ್ಯಾರಟ್‌ ದರ ಎರಡು ತಿಂಗಳಿಂದ ಕೆ.ಜಿ.ಗೆ 100 ರೂ. ಇದೆ.

ಹಾಗಲಕಾಯಿ 53 ರೂ., ಸೋರೆಕಾಯಿ 56 ರೂ. ಇದೆ. ಮೂಲಂಗಿ, ಬದನೆಕಾಯಿ ಮತ್ತಿತರ ತರಕಾರಿಗಳ ದರವೂ ಏರಿಕೆಯಾಗಿದೆ. ದಿಢೀರ್ ದರ ಏರಿಕೆ ಕಂಡಿದ್ದ ಕೊತ್ತಂಬರಿ ಸೊಪ್ಪು, ಬೀನ್ಸ್‌ ದರ ಇಳಿಕೆಯಾಗಿದೆ. ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ದರ ಮತ್ತೆ ಏರಿಕೆಯಾಗಿದೆ.ಕೆ.ಜಿ.ಗೆ 300 ರೂ. ತಲುಪಿದ್ದ ಕೊತ್ತಂಬರಿ ಸೊಪ್ಪು ಇದೀಗ 30 ರೂ.ಗೆ ಇಳಿದಿದೆ. 200 ರೂ. ತಲುಪಿದ್ದ ಬೀನ್ಸ್‌ ಕೆ.ಜಿ.ಗೆ 60 ರೂ ಆಲೂಗಡ್ಡೆ 50 ರೂ. ನಂತೆ ಮಾರಾಟವಾಗುತ್ತಿದೆ.