ಮುಂಬೈ: ರಿಲಯನ್ಸ್ ಜಿಯೋದ 2024-25ನೇ ಸಾಲಿನ ಪ್ರಥಮ ತ್ರೈಮಾಸಿಕದ, ಅಂದರೆ ಏಪ್ರಿಲ್‌ನಿಂದ ಜೂನ್ ತಿಂಗಳವರೆಗಿನ ಹಣಕಾಸು ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಲಾಗಿದೆ.

ಕಳೆದ ತ್ರೈಮಾಸಿಕದಲ್ಲಿ 5,337 ಕೋಟಿ ರೂಪಾಯಿಯ ನಿವ್ವಳ ಲಾಭ ಘೋಷಿಸಿದ್ದ ಕಂಪನಿಯು ಈ ತ್ರೈಮಾಸಿಕದಲ್ಲಿ 5,445 ಕೋಟಿ ರೂಪಾಯಿ ನಿವ್ವಳ ಲಾಭವನ್ನು ಗಳಿಸಿದೆ.

ರಿಲಯನ್ಸ್ ಜಿಯೋ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದು ಮತ್ತೆ ಮುಂದುವರಿದಿದೆ. ಜೂನ್‌ಗೆ ಕೊನೆಯಾದ ತ್ರೈಮಾಸಿಕದಲ್ಲಿ 90 ಲಕ್ಷ ಬಳಕೆದಾರರು ಸೇರ್ಪಡೆಯಾಗಿದ್ದಾರೆ. ಅಂದ ಹಾಗೆ ವರ್ಷದ ಹಿಂದಿನ ಇದೇ ಹಣಕಾಸು ತ್ರೈಮಾಸಿಕದಲ್ಲಿ ಜಿಯೋ 4,863 ಕೋಟಿ ರೂಪಾಯಿ ಲಾಭ ಗಳಿಸಿತ್ತು.

ಕಾರ್ಯಾಚರಣೆ ಮೂಲಕ ಬರುವಂತ ಆದಾಯವು 26,478 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ. ಕಳೆದ ತ್ರೈಮಾಸಿಕದಲ್ಲಿ ಕಾರ್ಯಾಚರಣೆ ಮೂಲಕವಾಗಿ 25,959 ಕೋಟಿ ರೂಪಾಯಿ ಆದಾಯ ಬಂದಿತ್ತು. ವರ್ಷದ ಹಿಂದಿನ ಇದೇ ಅವಧಿಯಲ್ಲಿ 24,042 ಕೋಟಿ ರೂಪಾಯಿ ಕಾರ್ಯಾಚರಣೆ ಮೂಲಕ ಆದಾಯ ಪಡೆದದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ತಿಂಗಳಿಗೆ ಪ್ರತಿ ಬಳಕೆದಾರರಿಂದ ಬರುವಂತ ಸರಾಸರಿ ಆದಾಯದಲ್ಲಿ, ಅಂದರೆ ಇದನ್ನು ಎಆರ್ ಪಿಯು ಎನ್ನಲಾಗುತ್ತದೆ. ಇದರಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಆದಾಯ ಹಾಗೂ ಇಬಿಐಟಿಡಿಎ ಬೆಳವಣಿಗೆಗೆ ಇದು ಕೊಡುಗೆ ನೀಡಿದೆ.