ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವೆ ಮತ್ತೆ ಭುಗಿಲೆದ್ದಿರುವ ಯುದ್ಧ ಷೇರು ಮಾರುಕಟ್ಟೆಯಲ್ಲಿ ಭಾರಿ ತಲ್ಲಣ ಸೃಷ್ಟಿಸಿದೆ.

ಇರಾನ್ ಮೇಲಿನ ಹೊಸ ದಾಳಿ ಬೆನ್ನಲ್ಲೇ, ಉಭಯ ದೇಶಗಳ ನಡುವಿನ ಮಧ್ಯಂತರ ಕದನ ವಿರಾಮ ಒಪ್ಪಂದ ಮುಕ್ತಾಯಗೊಂಡಿದೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಹೇಳಿಕೆ ಹೊರಬೀಳುತ್ತಿದ್ದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದ್ದು, ಭಾರತೀಯ ಷೇರು ಮಾರುಕಟ್ಟೆಯ ಮೇಲೂ ಇದು ಅತ್ಯಂತ ನಕಾರಾತ್ಮಕ ಪರಿಣಾಮ ಬೀರಿದೆ.

ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿ ಮರುಕಳಿಸುವ ಮುನ್ಸೂಚನೆ ಸಿಗುತ್ತಿದ್ದಂತೆ ಮುಂಬೈ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ತೀವ್ರ ಆತಂಕಗೊಂಡಿದ್ದಾರೆ. ಹೀಗಾಗಿ ಇಂದಿನ (ಜುಲೈ.8) ಆರಂಭಿಕ ವಹಿವಾಟಿನಲ್ಲಿಯೇ ಭಾರಿ ಕುಸಿತ ಕಂಡ ಸೆನ್ಸೆಕ್ಸ್ ಸುಮಾರು 1,700 ಅಂಕಗಳಷ್ಟು ತಳಕಚ್ಚಿದೆ. ಇತ್ತ ನಿಫ್ಟಿ ಸೂಚ್ಯಂಕ 23,900 ರಕ್ಕಿಂತ ಕೆಳಕ್ಕೆ ಕುಸಿಯುವ ಮೂಲಕ ಶೇಕಡಾ 2 ಕ್ಕಿಂತ ಹೆಚ್ಚು ನಷ್ಟ ಅನುಭವಿಸಿದೆ. ಮಾರುಕಟ್ಟೆಯ ಏರಿಳಿತವನ್ನು ಅಳೆಯುವ ಇಂಡಿಯಾ ವಿಐಎಕ್ಸ್ ಸೂಚ್ಯಂಕ 28 ರ ಗಡಿಯನ್ನು ದಾಟಿರುವುದು ಹೂಡಿಕೆದಾರರ ಆತಂಕಕ್ಕೆ ಸಾಕ್ಷಿಯಾಗಿದೆ.

ಇರಾನ್ ಜೊತೆ ಶಾಂತಿ ಮಾತುಕತೆಗಳು ಸಮಯ ವ್ಯರ್ಥ ಎಂಬ ಟ್ರಂಪ್ ಹೇಳಿಕೆ ಜಾಗತಿಕ ಆರ್ಥಿಕತೆಯ ಸ್ಥಿರತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು ಮತ್ತು ಹಣದುಬ್ಬರ ಹೆಚ್ಚಾಗಬಹುದು ಎಂಬ ಭೀತಿಯಿಂದಾಗಿ ದೇಶೀಯ ಮತ್ತು ವಿದೇಶಿ ಹೂಡಿಕೆದಾರರು ತಮ್ಮ ಬಂಡವಾಳವನ್ನು ಹಿಂತೆಗೆದುಕೊಳ್ಳಲು ಮುಂದಾಗಿದ್ದಾರೆ. ಭವಿಷ್ಯದಲ್ಲಿ ಉಭಯ ದೇಶಗಳ ನಡುವಿನ ಸಂಘರ್ಷ ಯಾವ ತಿರುವು ಪಡೆಯಲಿದೆ ಎಂಬುದರ ಆಧಾರದ ಮೇಲೆ ಮುಂಬರುವ ದಿನಗಳಲ್ಲಿ ಮಾರುಕಟ್ಟೆಯ ಚಲನೆ ನಿರ್ಧಾರವಾಗಲಿದೆ.