ನವದೆಹಲಿ: ಆಗಸ್ಟ್ 1ರಿಂದ ಪಾದರಕ್ಷೆಗಳ ಬೆಲೆಯನ್ನ ಹೆಚ್ಚಿಸಲು ಹೊಸ ಗುಣಮಟ್ಟದ ಮಾನದಂಡಗಳು ಸಜ್ಜಾಗಿವೆ. ಮುಂದಿನ ತಿಂಗಳಿನಿಂದ ಮಾರುಕಟ್ಟೆಯಲ್ಲಿ ಮಾರಾಟವಾಗುವ ಶೂಗಳು, ಚಪ್ಪಲಿಗಳು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನ ನವೀಕರಿಸಿದ ಗುಣಮಟ್ಟದ ಮಾರ್ಗಸೂಚಿಗಳನ್ನ ಅನುಸರಿಸಬೇಕಾಗುತ್ತದೆ.

ಹೌದು. . ಆಗಸ್ಟ್ 1ರಿಂದ ಬಿಐಎಸ್​ನ ಗುಣಮಟ್ಟ ನಿಯಂತ್ರಣ ಆದೇಶ ಜಾರಿಗೆ ಬರುತ್ತದೆ. ಪಾದರಕ್ಷೆ ತಯಾರಕರು ಹೊಸ ಗುಣಮಟ್ಟ ನಿಯಮಗಳಿಗೆ ಒಳಪಡುವುದು ಕಡ್ಡಾಯವಾಗಿರುತ್ತದೆ. ಈ ಕಾರಣಕ್ಕೆ ಚಪ್ಪಲಿ, ಶೂಗಳ ತಯಾರಿಕೆಯ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದ್ದು, ಇದರಿಂದ ಬೆಲೆ ಹೆಚ್ಚಳ ಸಂಭವ ಇದೆ.

ಹೀಗಾಗಿ ಇನ್ಮುಂದೆ ಮಾರುಕಟ್ಟೆಗೆ ಬರುವ ಪಾದರಕ್ಷೆಗಳಿಗೆ ಬಿಐಎಸ್ ಸ್ಟ್ಯಾಂಡರ್ಡ್ ಅನ್ನು ಕಡ್ಡಾಯ ಪಡಿಸಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಪಾದರಕ್ಷೆಗಳ ಲೆಕ್ಕವನ್ನು ಬಿಐಎಸ್ ವೆಬ್​ಸೈಟ್​ನಲ್ಲಿ ನೊಂದಾಯಿಸಿ ಕೊಡಬೇಕು. ಆ ಬಳಿಕ ಈ ಹಳೆಯ ಪಾದರಕ್ಷೆಗಳನ್ನು ಹಳೆಯ ಬೆಲೆಯಲ್ಲೇ ಮಾರಾಟ ಮಾಡಲು ಕಾಲಾವಕಾಶ ಕಲ್ಪಿಸಲಾಗಿದೆ.

ಹೊಸ ಬಿಐಎಸ್ ನಿಯಮಗಳು ಸಣ್ಣ ತಯಾರಕರಿಗೆ ಒಳಪಡುವುದಿಲ್ಲ. ವರ್ಷಕ್ಕೆ 50 ಕೋಟಿ ರೂಗಿಂತ ಕಡಿಮೆ ವಹಿವಾಟು ಹೊಂದಿರುವ ಪಾದರಕ್ಷೆ ತಯಾರಕರಿಗೆ ಈ ಬಿಐಎಸ್ ಸ್ಟ್ಯಾಂಡರ್ಡ್ ನಿಯಮದಿಂದ ವಿನಾಯಿತಿ ನೀಡಲಾಗಿದೆ.