ಬೆಂಗಳೂರು: ಇತ್ತೀಚೆಗೆ ಗಗನಕ್ಕೇರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಕಳೆದ ಒಂದು ತಿಂಗಳಿಂದ ಭಾರಿ ಇಳಿಕೆಯಾಗಿದೆ. ಈ ವರ್ಷ ದಾಖಲೆ ಬರೆದಿದ್ದ ಬಂಗಾರದ ಬೆಲೆ ಕಳೆದ ಒಂದು ತಿಂಗಳಲ್ಲಿ 10 ಗ್ರಾಂಗೆ ಬರೋಬ್ಬರಿ 10 ರಿಂದ 15 ಸಾವಿರ ರೂಪಾಯಿಯಷ್ಟು ಕುಸಿದಿದೆ. ಅದೇ ರೀತಿ ಬೆಳ್ಳಿ ಬೆಲೆಯಲ್ಲೂ ಭಾರಿ ಮಹಾಕುಸಿತ ಕಂಡುಬಂದಿದ್ದು, ಹಿಂದೆ ಒಂದು ಕೆ.ಜಿ.ಗೆ 2,37,000 ರೂ. ಇದ್ದ ಬೆಳ್ಳಿ ಈಗ 2 ಲಕ್ಷ ರೂಪಾಯಿಗೆ ಇಳಿದಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕದ ಸರ್ಕಾರಿ ಬಾಂಡ್ಗಳ ಬಡ್ಡಿದರ ಹೆಚ್ಚಾಗುವ ಮುನ್ಸೂಚನೆ ಇರುವುದರಿಂದ ಹೂಡಿಕೆದಾರರು ತಾವು ಕೂಡಿಟ್ಟಿದ್ದ ಚಿನ್ನವನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಇದರೊಂದಿಗೆ ನ್ಯಾನೋ ತಂತ್ರಜ್ಞಾನದ ಬಳಕೆಯಿಂದ ಬೆಳ್ಳಿಯ ಬಳಕೆಯಲ್ಲಿ ಇಳಿಕೆಯಾಗಿರುವುದು ಹಾಗೂ ಅಂತರರಾಷ್ಟ್ರೀಯ ಯುದ್ಧಗಳೂ ಸಹ ಬೆಲೆ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಕರ್ನಾಟಕ ಜ್ಯುವೆಲರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಬೆಲೆ ಇಳಿಕೆಯು ವರ್ಷಾಂತ್ಯದವರೆಗೂ ಮುಂದುವರಿಯುವ ಸಾಧ್ಯತೆಯಿದ್ದು, ಶೇ. 10ರವರೆಗೆ ಇನ್ನೂ ಕಡಿಮೆ ಆಗಬಹುದು ಎಂದು ಅಂದಾಜಿಸಲಾಗಿದೆ. ಆದರೂ ನವೆಂಬರ್ 3ರಂದು ನಡೆಯಲಿರುವ ಅಮೆರಿಕದ ಫೆಡರಲ್ ಸರ್ಕಾರಿ ಬ್ಯಾಂಕ್ ಸಭೆಯ ನಿರ್ಧಾರದ ಮೇಲೆ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯ ಕಣ್ಣು ನೆಟ್ಟಿದೆ.
ಈ ಸಭೆಯಲ್ಲಿ ಬಾಡ್ ಬಡ್ಡಿ ದರ ಹೆಚ್ಚಿಸಿದರೆ ಚಿನ್ನದ ಬೆಲೆ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ. ಹಾಗಾಗಿ, ಗ್ರಾಹಕರು ಹಬ್ಬ ಮತ್ತು ಮದುವೆಗೆ ಈಗಲೇ ಎಲ್ಲವನ್ನೂ ಖರೀದಿಸದೆ, ಡಿಸೆಂಬರ್ ಕ್ರಿಸ್ಮಸ್ ವೇಳೆಗೆ ಮಾರುಕಟ್ಟೆ ಪರಿಸ್ಥಿತಿ ಗಮನಿಸಿ ಕೇವಲ ಬಳಕೆಗೆ ಬೇಕಾದಷ್ಟು ಮಾತ್ರ ಚಿನ್ನ ಖರೀದಿಸುವುದು ಉತ್ತಮ ಎಂದು ಕರ್ನಾಟಕ ಜ್ಯುವೆಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಶರವಣ ಸಲಹೆ ನೀಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

