ನವದೆಹಲಿ: ಹೊಸ ವಾಹನಗಳ ಬೆಲೆಯನ್ನು ಆಗಸ್ಟ್ 1ರಿಂದ ಹೆಚ್ಚಿಸಲು ವಾಹನ ತಯಾರಕ ಸಂಸ್ಥೆಗಳು ತೀರ್ಮಾನಿಸಿವೆ.

ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳು ಹಾಗೂ ಆರ್ಥಿಕ ತಲ್ಲಣಗಳಿಂದಾಗಿ ವಾಹನ ತಯಾರಿಕೆಗೆ ಅಗತ್ಯವಿರುವ ಉಕ್ಕು, ಅಲ್ಯೂಮಿನಿಯಂ, ರಬ್ಬರ್, ಪ್ಲಾಸ್ಟಿಕ್, ಬ್ಯಾಟರಿ ಮತ್ತು ಎಲೆಕ್ಟ್ರಾನಿಕ್ ಚಿಪ್‌ಗಳಂತಹ ಬಿಡಿಭಾಗಗಳ ವೆಚ್ಚ ತೀವ್ರವಾಗಿ ಹೆಚ್ಚಾಗಿದೆ. ಈ ನಿರಂತರ ತಯಾರಿಕಾ ವೆಚ್ಚದ ಹೊರೆಯನ್ನು ಸರಿದೂಗಿಸಲು ಕಾರು ಹಾಗೂ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಬೆಲೆ ಏರಿಕೆಯ ಹಾದಿ ಹಿಡಿದಿವೆ.

ವಾಹನಗಳ ಬೆಲೆ ಏರಿಕೆಯಾಗುತ್ತಿರುವುದು ಕೇವಲ ಹೊಸ ಕಾರು ಅಥವಾ ಬೈಕ್ ಕೊಳ್ಳುವವರ ಮೇಲೆ ಮಾತ್ರವಲ್ಲದೆ, ಬಾಡಿಗೆ ವಾಹನಗಳನ್ನು ನೆಚ್ಚಿಕೊಂಡಿರುವ ಸಾಮಾನ್ಯ ಪ್ರಯಾಣಿಕರ ಮೇಲೆಯೂ ನೇರ ಪರಿಣಾಮ ಬೀರಲಿದೆ. ಹೊಸ ಕಾರು ಹಾಗೂ ಟಿಟಿಗಳ ಖರೀದಿ ವೆಚ್ಚ ಹೆಚ್ಚಾಗುವುದರಿಂದ, ಟ್ರಾವೆಲ್ಸ್ ಏಜೆನ್ಸಿಗಳಿಗೂ ನಿರ್ವಹಣೆ ಕಷ್ಟವಾಗಲಿದೆ.

ಈಗಾಗಲೇ ಇಂಧನ ದರ ಮತ್ತು ಟೋಲ್ ಶುಲ್ಕಗಳು ಗಣನೀಯವಾಗಿ ಹೆಚ್ಚಾಗಿರುವುದರಿಂದ, ನಷ್ಟ ಸರಿದೂಗಿಸಲು ಪ್ರಯಾಣಿಕರ ಬಾಡಿಗೆ ದರವನ್ನು ಏರಿಕೆ ಮಾಡಲು ಕರ್ನಾಟಕ ಟ್ರಾವೆಲ್ಸ್ ಅಸೋಸಿಯೇಷನ್ ಚಿಂತನೆ ನಡೆಸಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಟ್ರಾವೆಲ್ಸ್ ವಾಹನಗಳಲ್ಲಿ ಪ್ರಯಾಣಿಸುವುದು ಮತ್ತಷ್ಟು ದುಬಾರಿಯಾಗುವುದು ಖಚಿತವಾಗಿದೆ.