ಬೆಂಗಳೂರು: ಖಾಸಗಿ ಕಂಪನಿಗಳಲ್ಲಿ ಕೆಲ ಸ್ತರದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಪೂರ್ಣ ಮೀಸಲಾತಿ ಕೊಡುವ ಪ್ರಸ್ತಾಪಕ್ಕೆ ಹಲವು ಉದ್ಯಮಿಗಳ ಕಟು ವಿರೋಧ ವ್ಯಕ್ತವಾಗಿದೆ.
ಈ ಸಾಲಿಗೆ ಫೋನ್ಪೆ ಸಂಸ್ಥಾಪಕ ಮತ್ತು ಸಿಇಒ ಸಮೀರ್ ನಿಗಮ್ ಸೇರಿದ್ದಾರೆ. ನಿನ್ನೆ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಅವರು ರಾಜ್ಯ ಸರ್ಕಾರದ ನಡೆಯನ್ನು ಬಲವಾಗಿ ಟೀಕಿಸಿದ್ದಾರೆ. ತನ್ನ ಮಕ್ಕಳು ತಮ್ಮ ಸ್ವಂತ ಊರಿನಲ್ಲಿ ಕೆಲಸಕ್ಕೆ ಸೇರಲು ಅನರ್ಹರಾ ಎಂದು ಪ್ರಶ್ನಿಸಿದ ಅವರು ರಾಜ್ಯ ಸರ್ಕಾರ ರೂಪಿಸಿದ ಮಸೂದೆಯನ್ನು ನಾಚಿಕೆಗೇಡಿತನ ಎಂದು ಬಣ್ಣಿಸಿದ್ದಾರೆ.
‘ನನಗೆ 46 ವರ್ಷ ವಯಸ್ಸಾಗಿದೆ. ಯಾವುದೇ ರಾಜ್ಯದಲ್ಲಿ 15 ವರ್ಷಕ್ಕೂ ಹೆಚ್ಚು ಕಾಲ ವಾಸಿಸಿಲ್ಲ. ನನ್ನ ತಂದೆ ನೇವಿಯಲ್ಲಿ ಕೆಲಸ ಮಾಡಿದ್ದಾರೆ. ದೇಶಾದ್ಯಂತ ಅವರ ಪೋಸ್ಟಿಂಗ್ ಆಗಿದೆ. ಅವರ ಮಕ್ಕಳು ಕರ್ನಾಟಕದಲ್ಲಿ ಉದ್ಯೋಗ ಗಳಿಸಲು ಅರ್ಹರಲ್ಲವಾ? ನಾನು ಕಂಪನಿಗಳನ್ನು ಸ್ಥಾಪಿಸಿದ್ದೇನೆ. ದೇಶಾದ್ಯಂತ 25,000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಿದ್ದೇನೆ. ನನ್ನ ಮಕ್ಕಳು ಅವರ ಸ್ವಂತ ನಗರದಲ್ಲಿ ಕೆಲಸ ಮಾಡಲು ಅನರ್ಹರಾ? ಇದು ನಾಚಿಕೆಗೇಡಿತನದ ಸಂಗತಿ,’ ಎಂದು ಸಮೀರ್ ನಿಗಮ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಸಂಪುಟ ಸಭೆಯಲ್ಲಿ ಖಾಸಗಿ ಕ್ಷೇತ್ರದಲ್ಲಿ ಸಿ ಮತ್ತು ಡಿ ದರ್ಜೆ ಉದ್ಯೋಗಗಳಿಗೆ ಕನ್ನಡಿಗರಿಗೆ ನೂರಕ್ಕೆ ನೂರು ಮೀಸಲಾತಿ ಕೊಡುವುದು ಸೇರಿದಂತೆ ವಿವಿಧ ಅಂಶಗಳಿರುವ ಮಸೂದೆಗೆ ಅಂಗೀಕಾರ ಮಾಡಲಾಗಿತ್ತು. ಸಿಎಂ ಸಿದ್ದರಾಮಯ್ಯ ಕೂಡ ನಿನ್ನೆ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದರು. ಅದಾದ ಬಳಿಕ ಬೆಂಗಳೂರಿನ ಉದ್ಯಮ ವಲಯದಿಂದ ಕಟು ಟೀಕೆಗಳು ಕೇಳಿಬಂದವು.

