ನವದೆಹಲಿ: ಹೆದ್ದಾರಿಯಲ್ಲಿ ಬಳಸುವವರು ತಮ್ಮ ವಾಹನದ ವಿಂಡ್ಸ್ಕ್ರೀನ್ಗೆ ಫಾಸ್ಟ್ಯಾಗ್ ಅಂಟಿಸದೇ ಹೋದರೆ ಭಾರೀ ಬೆಲೆ ತೆರಬೇಕಾಗಬಹುದು. ಟೋಲ್ ಪ್ಲಾಜಾದಲ್ಲಿ ವಿಳಂಬವಾಗುವುದನ್ನು ತಪ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎನ್ಎಚ್ಎಇ ನಿಯಮಗಳನ್ನು ಬಿಗಿಗೊಳಿಸಿದೆ.
ಕೆಲ ವಾಹನ ಸವಾರರು ವಿಂಡ್ಸ್ಕ್ರೀನ್ ಮೇಲೆ ಫಾಸ್ಟ್ಯಾಗ್ ಅಳವಡಿಸದೇ ಇರುವುದು ಟೋಲ್ ಪ್ಲಾಜಾದಲ್ಲಿ ಟೋಲ್ ಕಲೆಕ್ಷನ್ ಕಾರ್ಯ ನಿಧಾನಗೊಳ್ಳುತ್ತಿರುವುದು ಕಂಡು ಬಂದಿತ್ತು. ಈ ಕಾರಣಕ್ಕೆ ಹೆದ್ದಾರಿ ಪ್ರಾಧಿಕಾರ ಹೊಸ ನಿಯಮಗಳನ್ನು ಮಾಡಿದ್ದು, ಅದರಂತೆ ಕಾರು ಅಥವಾ ಇತರ ತ್ರಿಚಕ್ರ ಮತ್ತು ನಾಲ್ಕುಚಕ್ರ ವಾಹನಗಳ ವಿಂಡ್ಶೀಲ್ಡ್ನಲ್ಲಿ ಟ್ಯಾಗ್ ಅಂಟಿಸದಿದ್ದರೆ ಅವರಿಂದ ಎರಡು ಪಟ್ಟು ಹೆಚ್ಚು ಶುಲ್ಕ ವಸೂಲಿ ಮಾಡಬೇಕೆಂದು ಅಪ್ಪಣೆ ಮಾಡಿದೆ. ಅಷ್ಟೇ ಅಲ್ಲ, ಅಂಥ ವಾಹನಗಳನ್ನು ಬ್ಲ್ಯಾಕ್ಲಿಸ್ಟ್ಗೆ ಹಾಕುವಂತೆಯೂ ಸೂಚಿಸಲಾಗಿದೆ.
ಈ ಹೊಸ ನಿಯಮಗಳ ಬಗ್ಗೆ ಎಲ್ಲಾ ಟೋಲ್ ಸಂಗ್ರಹ ಏಜೆನ್ಸಿಗಳಿಗೆ ಗುರುವಾರ ಎಸ್ಒಪಿ ಕಳುಹಿಸಲಾಗಿದೆ. ಹೆದ್ದಾರಿಯ ಎಲ್ಲಾ ಟೋಲ್ ಸೆಂಟರ್ಗಳಲ್ಲಿ ಈ ಬಗ್ಗೆ ಎಚ್ಚರಿಕೆಯ ಬೋರ್ಡ್ ಹಾಕಲಾಗುತ್ತಿದೆ. ವಾಹನದ ಮುಂಭಾಗದ ಗಾಜಿನ (ವಿಂಡ್ಶೀಲ್ಡ್) ಮೇಲೆ ಫಾಸ್ಟ್ಯಾಗ್ ಅಂಟಿಸುವುದು ಅಗತ್ಯವಾಗಿದೆ. ಟೋಲ್ ಪ್ಲಾಜಾದಲ್ಲಿ ಇರುವ ಸೆನ್ಸರ್ಗಳು ಈ ಮುಂಭಾಗದ ವಿಂಡ್ಶೀಲ್ಡ್ನಲ್ಲಿರುವ ಫಾಸ್ಟ್ಯಾಗ್ ಅನ್ನು ಗುರುತಿಸಿ ನಿಗದಿತ ಶುಲ್ಕ ಪಡೆಯುತ್ತವೆ.
ವಾಹನದ ಫ್ರಂಡ್ ವಿಂಡ್ಸ್ಕ್ರೀನ್ನಲ್ಲಿ ಫಾಸ್ಟ್ಯಾಗ್ ಅಳವಡಿಸದೇ ಇರುವ ವಾಹನಗಳ ಮೇಲೆ ನಿಗಾ ಇಡಲು ಎಲ್ಲಾ ಟೋಲ್ ಪ್ಲಾಜಾ ಬಳಿ ಇರುವ ಸಿಸಿಟಿವಿಯನ್ನು ಬಳಸಲಾಗುತ್ತದೆ. ಫಾಸ್ಟ್ಯಾಗ್ ಅನ್ನು ಸರಿಯಾಗಿ ಹಾಕದ ವಾಹನಗಳ ರಿಜಿಸ್ಟ್ರೇಶನ್ ನಂಬರ್ ಅನ್ನು ಸಿಸಿಟಿವಿ ಫೂಟೇಜ್ ಸಹಾಯದಿಂದ ಪಡೆಯಲಾಗುತ್ತದೆ. ಇಂಥ ವಾಹನಗಳಿಂದ ಎರಡು ಪಟ್ಟು ಹೆಚ್ಚು ಶುಲ್ಕ ವಸೂಲಾತಿ ಆಗಿದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.
ಇನ್ನು ಬ್ಯಾಂಕುಗಳು ಅಥವಾ ಏಜೆನ್ಸಿಗಳು ಫಾಸ್ಟ್ಯಾಗ್ ವಿತರಿಸುವ ಸಂದರ್ಭದಲ್ಲೇ ಅದನ್ನು ನಿಗದಿತ ವಾಹನದ ಮುಂಭಾಗದ ವಿಂಡ್ಶೀಲ್ಡ್ ಮೇಲೆ ಅಂಟಿಸಲಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೆದ್ದಾರಿ ಸಚಿವಾಲಯ ಆದೇಶಿಸಿದೆ.

