ಬೆಂಗಳೂರು: ಐಟಿ-ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ 20 ಲಕ್ಷ ಉದ್ಯೋಗಿಗಳಿಗೆ ಬಿಗ್ ಶಾಕ್ ಆಗೋ ಸುದ್ದಿಯೊಂದು ಹೊರ ಬಿದ್ದಿದೆ. ಇನ್ಮುಂದೆ ಐಟಿ-ಬಿಟಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಕೆಲಸದ ಸಮಯ ವಿಸ್ತರಣೆಯಾಗಲಿದೆ.
ಕೆಲಸದ ಅವಧಿ 9 ಗಂಟೆ ಬದಲಿಗೆ 14 ಗಂಟೆಗಳ ಕಾಲ ಉದ್ಯೋಗಿಗಳು ಕೆಲಸ ಮಾಡುವ ಕಾನೂನು ತರಲು ಸರ್ಕಾರದ ಮೇಲೆ ಐಟಿ-ಬಿಟಿ ಕಂಪನಿಗಳು ಒತ್ತಡ ಹಾಕಿವೆ. ಈ ಒತ್ತಡಕ್ಕೆ ರಾಜ್ಯ ಸರ್ಕಾರ ಮಣಿದಿದೆಯಾ ಎಂಬ ಪ್ರಶ್ನೆ ಮೂಡಿದೆ. ಏಕೆಂದರೆ ಕಾರ್ಮಿಕ ಇಲಾಖೆ ಮೂಲಕವೇ ಕಾನೂನು ಜಾರಿ ಮಾಡಲು ಸಿದ್ಧತೆ ನಡೆಯುತ್ತಿದೆ. ಸಂಬಳದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ, ಆದರೆ ಕೆಲಸದ ಅವಧಿಯನ್ನು ಮಾತ್ರ ಹೆಚ್ಚು ಮಾಡುತ್ತಾರೆ.
ಐಟಿ ಕಂಪನಿಗಳಲ್ಲಿ ಉದ್ಯೋಗಿಗಳ ಕೆಲಸದ ಸಮಯ ವಿಸ್ತರಣೆ ಮಾಡುವುದಕ್ಕೆ ಕಾರ್ಮಿಕ ಇಲಾಖೆ ಬಹುತೇಕವಾಗಿ ಒಪ್ಪಿಗೆ ನೀಡಿದಂತೆ ಆಗಿದೆ. ಈ ವರೆಗೆ ಕೇವಲ 9 ಗಂಟೆ ಮಾತ್ರ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಇನ್ಮುಂದೆ 14 ಗಂಟೆ ಕೆಲಸ ಮಾಡಬೇಕಂತೆ.
ಇನ್ನು ಐಟಿ ಉದ್ಯೋಗಿಗಳ ಅಸೋಸಿಯೇಷನ್ ಜೊತೆಗೆ ಕಾರ್ಮಿಕ ಇಲಾಖೆ ಸಭೆ ನಡೆಸಿದೆ. ಈ ಸಭೆಯಲ್ಲಿ ಈ ಕಾನೂನಿಗೆ ಐಟಿ ನೌಕರರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. 14 ಗಂಟೆ ಕೆಲಸ ಮಾಡುವುದುದರಿಂದ ಮಾನಸಿಕ ಒತ್ತಡ ಹಾಗೂ ಹಿಂಸೆಗೆ ಒಳಗಾಗುತ್ತೇವೆ. ಹೀಗಾಗಿ ಸರ್ಕಾರ ಕಾನೂನು ತರಬಾರದು ಎಂದು ಪಟ್ಟು ಹಿಡಿದಿದ್ದಾರೆ. ಈಗಾಗಲೇ ಈ ಬಗ್ಗೆ ಸರ್ಕಾರ, ಕಾರ್ಮಿಕ ಇಲಾಖೆಗೆ ಪತ್ರ ಬರೆದಿದೆ.

