ಮಂಗಳೂರು: ಕರಾವಳಿ ಭಾಗದ ಹೆಚ್ಚಿನ ಕೃಷಿಕರು ವಾಣಿಜ್ಯ ಬೆಳೆಯಾದ ಅಡಿಕೆಯನ್ನೇ ತನ್ನ ಜೀವನಾಧಾರವನ್ನಾಗಿ ಮಾಡಿಕೊಂಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅಡಿಕೆ ಬೆಳೆಯೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅಡಿಕೆಗೆ ಪರ್ಯಾಯವಾದ ಕೃಷಿಯತ್ತ ಕೆಲ ಕೃಷಿಕರು ವಾಲುತ್ತಿದ್ದಾರೆ‌‌. ಈ ಪರ್ಯಾಯ ಬೆಳೆಗಳಲ್ಲಿ ವಿದೇಶಿ ಹಣ್ಣುಗಳ ಬೆಳೆಗಳೂ ಸೇರಿಕೊಳ್ಳುತ್ತಿದ್ದು, ಇಂಥಹುದೇ ಒಂದು ವಿದೇಶಿ ಹಣ್ಣನ್ನು ಬೆಳೆದು ದಕ್ಷಿಣ ಕನ್ನಡದ ಕೃಷಿಕರೊಬ್ಬರು ಭರ್ಜರಿ ಇಳುವರಿ ಪಡೆಯುತ್ತಿದ್ದಾರೆ.

ಹೆಚ್ಚುತ್ತಿರುವ ಅಡಿಕೆ ಬೆಳೆಯ ವ್ಯಾಪ್ತಿ, ಹಳದಿ ರೋಗ, ಕೊಳೆರೋಗ, ಕಾರ್ಮಿಕರ ಕೊರತೆ ಹೀಗೆ ಹಲವು ರೀತಿಯ ಸವಾಲುಗಳ ನಡುವೆ ಅಡಿಕೆ ಬೆಳೆಗಾರ ಇಂದು ಅಡಿಕೆಯ ಜೊತೆಗೆ ಮಿಶ್ರ ಬೆಳೆಗಳತ್ತಲೂ ಆಕರ್ಷಿತರಾಗುತ್ತಿದ್ದಾರೆ. ಇಂಥ ಕೃಷಿಕರು ಅಡಿಕೆಯ ಜೊತೆಗೆ ಇತ್ತೀಚಿನ ದಿನಗಳಲ್ಲಿ ವಿದೇಶಿ ಹಣ್ಣುಗಳ ಬೆಳೆಯತ್ತಲೂ ಚಿತ್ತ ನೆಟ್ಟಿದ್ದಾರೆ. ರಂಬೂಟನ್, ಅವಕಾಡೊ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲು ಆರಂಭಿಸಿದ್ದಾರೆ.
Screenshot 2024 07 26 135936

ವಿಯೆಟ್ನಾಂ ಮೂಲ ಡ್ರ್ಯಾಗನ್ ಫ್ರುಟ್ ಗೆ ಇಂದು ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದ್ದು, ಈ ಹಣ್ಣನ್ನು ಬೆಳೆದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಬಿರ್ಮನ್ ಪಳಿಕೆಯ ಕೃಷಿಕ ಅಂಟೋನಿ ಉತ್ತಮ ಇಳುವರಿಯನ್ನು ಪಡೆಯುತ್ತಿದ್ದಾರೆ. ತನ್ನ ನಾಲ್ಕು ಎಕರೆ ರಬ್ಬರ್ ತೋಟವನ್ನು ಕಡಿದು, ಅದರಲ್ಲಿ ಡ್ರ್ಯಾಗನ್ ಫ್ರುಟ್ ಗಿಡಗಳನ್ನು ನೆಟ್ಟ ಅಂಟೋನಿಯವರಿಗೆ ಗಿಡ ನೆಟ್ಟು ಒಂದು ವರ್ಷದಲ್ಲೇ ಇಳುವರಿ ಬರಲು ಆರಂಭವಾಗಿದೆ. ನಾಲ್ಕು ಎಕರೆ ಜಾಗವನ್ನು ಸಮತಟ್ಟು ಮಾಡಲು, ಗಿಡಗಳ ನಾಟಿ, ತೋಟದ ಸುತ್ತ ವಿದ್ಯುತ್ ತಂತಿ ಬೇಲಿ, ಹನಿ ನೀರಾವರಿ ಸೇರಿದಂತೆ ಇತರ ಕೆಲಸಗಳಿಗಾಗಿ ಸುಮಾರು 40 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿರುವ ಅಂಟೋನಿಯವರಿಗೆ ಮೊದಲ ಕಟಾವಿನಲ್ಲೇ ಸುಮಾರು 30 ಟನ್ ಡ್ರ್ಯಾಗನ್ ಫ್ರುಟ್ ದೊರೆತಿದೆ. ಮುಂದಿನ ಕಟಾವಿನಲ್ಲಿ ಬೆಳೆ ಬೆಳೆಸಲು ವಿನಿಯೋಗಿಸಿದ ಎಲ್ಲಾ ಬಂಡವಾಳವನ್ನು ಹಿಂಪಡೆಯುವ ವಿಶ್ವಾಸದಲ್ಲೂ ಇದ್ದಾರೆ.
Screenshot 2024 07 26 140043

ಡ್ರ್ಯಾಗನ್ ಫ್ರುಟ್ ಬೆಳೆಗೆ ಇತರ ಬೆಳೆಗೆ ನೀಡಬೇಕಾದಷ್ಟು ಕಾಳಜಿಯ ಅನಿವಾರ್ಯವೂ ಇಲ್ಲ. ಗಿಡದ ಬುಡದಲ್ಲಿ ಬೆಳೆಯುವ ಕಳೆಗಳನ್ನು ಕೀಳುವುದು, ಸಮಯಕ್ಕೆ ಸರಿಯಾಗಿ ನೀರು ಮತ್ತು ಗೊಬ್ಬರದ ಪೂರೈಕೆ ಮಾಡಿದರೆ ಸಾಕು ಎನ್ನುತ್ತಾರೆ ಅಂಟೋನಿ. ಅಡಿಕೆ ಗಿಡಗಳನ್ನು ನೆಟ್ಟು ಕನಿಷ್ಟ ನಾಲ್ಕು ತಿಂಗಳು ಇಳುವರಿ ಪಡೆಯಲು ಕಾಯಬೇಕಾಗಿದ್ದು, ಡ್ರ್ಯಾಗನ್ ಫ್ರುಟ್ ನಾಟಿ ಮಾಡಿ ಎರಡು ವರ್ಷದ ಒಳಗೆ ಇಳುವರಿ ಪಡೆಯಲು ಸಾಧ್ಯವಿದೆ. ಅಂಟೋನಿಯವರು ಕೇವಲ ಡ್ರ್ಯಾಗನ್ ಫ್ರುಟ್ ಮಾತ್ರವಲ್ಲದೆ ರಂಬೂಟನ್ ಬೆಳೆಯನ್ನೂ ಬೆಳೆಯುತ್ತಿದ್ದು, ಡ್ರ್ಯಾಗನ್ ಫ್ರುಟ್ ನ ಬುಡದಲ್ಲಿ ಅನಾನಸ್ ಗಿಡಗಳನ್ನೂ ಹಾಕಿದ್ದಾರೆ.

ಅಡಿಕೆ ಬೆಳೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮಾರುಕಟ್ಟೆಯಲ್ಲಿ ಅಡಿಕೆಯ ಬೆಲೆಯ ಏರಿಳಿತವೂ ಬೆಳೆಗಾಗರ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಡ್ರ್ಯಾಗನ್ ಫುಟ್ ನಂತಹ ಆಹಾರ ಬೆಳೆಗಳು ಕೃಷಿಕನ ಕೈ ಹಿಡಿಯುವ ಸಾಧ್ಯತೆಯೂ ಇದೆ.