ಲಂಡನ್‌: ಅಮೆರಿಕ ಮತ್ತು ಇರಾನ್ ನಡುವಿನ ಮಿಲಿಟರಿ ಸಂಘರ್ಷ ಮತ್ತೆ ತೀವ್ರಗೊಂಡಿರುವ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರಿ ಜಿಗಿತ ಕಂಡಿದೆ.

ಅಂತರರಾಷ್ಟ್ರೀಯ ಮಾನದಂಡವಾಗಿರುವ ಬ್ರೆಂಟ್ ಕಚ್ಚಾ ತೈಲ ಬೆಲೆಯು 1.2% ಕ್ಕೂ ಹೆಚ್ಚು ಏರಿಕೆಯಾಗಿದ್ದು, ಪ್ರತಿ ಬ್ಯಾರಲ್‌ಗೆ 92.09 ಡಾಲರ್‌ಗೆ(8,800 ರೂ.) ತಲುಪಿದೆ. ಇದು ಜೂನ್ ತಿಂಗಳ ಬಳಿಕ ದಾಖಲಾದ ಅತಿ ಹೆಚ್ಚಿನ ಬೆಲೆಯಾಗಿದೆ.

ಅದೇ ರೀತಿ ಅಮೆರಿಕದ ಪ್ರಮುಖ ಕಚ್ಚಾ ತೈಲ ಮಾನದಂಡವಾದ ಡಬ್ಲೂಟಿಐ ದರ ಕೂಡ 1.1%ರಷ್ಟು ಏರಿಕೆಯಾಗಿದ್ದು, ಬ್ಯಾರಲ್‌ಗೆ 85.23 ಡಾಲರ್‌ಗೆ ಏರಿದೆ.

ಜಗತ್ತಿನ ಸುಮಾರು 20% ನಷ್ಟು ತೈಲ ಸಾಗಣೆಯಾಗುವ ಪ್ರಮುಖ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ತೈಲ ಟ್ಯಾಂಕರ್‌ಗಳನ್ನು ತಡೆದು ದಾಳಿ ನಡೆಸಿದೆ.

ಅಮೆರಿಕದ ಸೇನಾ ನೆಲೆಗಳು ಹಾಗೂ ರೇಡಾರ್ ಕೇಂದ್ರಗಳನ್ನು ಗುರಿಯಾಗಿಸಿ ಇರಾನ್ ಸರಣಿ ದಾಳಿ ನಡೆಸಿದ್ದು, ಪ್ರತಿಯಾಗಿ ಅಮೆರಿಕ ಕೂಡ ಇರಾನ್ ಆಸ್ತಿಗಳ ಮೇಲೆ ಬಾಂಬ್ ದಾಳಿ ನಡೆಸಿದೆ. ಇದರಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದೆ.

ಇರಾನ್‌ ಮತ್ತು ಅಮೆರಿಕ ಮಧ್ಯೆ ಕದನ ವಿರಾಮ ಘೋಷಣೆಯಾಗಿ ಮಾತುಕತೆ ಆರಂಭವಾದ ಬಳಿಕ ಜೂನ್‌ ಕೊನೆಯ ವಾರದಲ್ಲಿ ಕಚ್ಚಾ ತೈಲ ದರ 70 ಡಾಲರ್‌ಗೆ ಇಳಿಕೆಯಾಗಿತ್ತು.