ಮುಂಬೈ: ಅಮೆರಿಕ ಮತ್ತು ಇರಾನ್ ನಡುವೆ ಜಾಗತಿಕ ಮಟ್ಟದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವುದು ಭಾರತೀಯ ಷೇರು ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಇದರ ಫಲವಾಗಿ ಶುಕ್ರವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಬರೋಬ್ಬರಿ 800ಕ್ಕೂ ಅಧಿಕ ಅಂಕಗಳ ಭಾರಿ ಕುಸಿತ ಕಂಡಿದೆ.

ವಹಿವಾಟಿನ ಅವಧಿಯಲ್ಲಿ ಬಿಎಸ್ಇ ಸೆನ್ಸೆಕ್ಸ್ 830.58 ಅಂಕಗಳಷ್ಟು ಕುಸಿದು 75,560.81 ಅಂಕಗಳ ಮಟ್ಟಕ್ಕೆ ತಲುಪಿದರೆ, ಎನ್ಎಸ್ಇ ನಿಫ್ಟಿ 238.95 ಅಂಕಗಳ ನಷ್ಟದೊಂದಿಗೆ 23,630.65 ಅಂಕಗಳಿಗೆ ಕುಸಿಯಿತು. ಮಧ್ಯಾಹ್ನ 12 ಗಂಟೆಯ ವೇಳೆಗೆ ಸೆನ್ಸೆಕ್ಸ್ 618.77 ಅಂಕಗಳ ಇಳಿಕೆಯೊಂದಿಗೆ 75,773.07 ಅಂಕಗಳಲ್ಲಿದ್ದರೆ, ನಿಫ್ಟಿ 23,700 ಅಂಕಗಳ ಮಟ್ಟದಲ್ಲಿ ವಹಿವಾಟು ನಡೆಸುತ್ತಿತ್ತು.

ಈ ಭಾರಿ ಕುಸಿತದ ನಡುವೆಯೂ ಸಿಪ್ಲಾ, ಎಚ್‌ಡಿಎಫ್‌ಸಿ ಲೈಫ್, ಟ್ರೆಂಟ್, ರಿಲಯನ್ಸ್, ಐಟಿಸಿ, ಎಚ್‌ಸಿಎಲ್ ಟೆಕ್, ಮಾರುತಿ, ವಿಪ್ರೋ ಹಾಗೂ ಅದಾನಿ ಎಂಟರ್‌ಪ್ರೈಸಸ್‌ನಂತಹ ಷೇರುಗಳು ಬೆಳಗ್ಗಿನ ವಹಿವಾಟಿನಲ್ಲಿ ಸ್ವಲ್ಪ ಮಟ್ಟಿನ ಲಾಭ ತಂದುಕೊಟ್ಟವು. ಆದರೆ ಮಹೀಂದ್ರ ಅಂಡ್ ಮಹೀಂದ್ರ, ಬಜಾಜ್ ಫೈನಾನ್ಸ್, ಇನ್ಫೋಸಿಸ್, ಭಾರ್ತಿ ಏರ್‌ಟೆಲ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಏಷ್ಯನ್ ಪೇಂಟ್ಸ್ ಸೇರಿದಂತೆ ಪ್ರಮುಖ ಸಂಸ್ಥೆಗಳ ಷೇರುಗಳು ನಷ್ಟ ಅನುಭವಿಸಿದವು.