ನವದೆಹಲಿ: ಭಾರತದ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆಯಾದ ಬಿಎಸ್‌ಎನ್‌ಎಲ್ ಅತ್ಯಂತ ದುರ್ಗಮ ಪ್ರದೇಶಗಳಲ್ಲೂ ಸಂಪರ್ಕ ಕಲ್ಪಿಸುವ ಸಾಮರ್ಥ್ಯವಿರುವ ಅತ್ಯಾಧುನಿಕ ಉಪಗ್ರಹ ಫೋನ್‌ಗಳನ್ನು ಅಧಿಕೃತವಾಗಿ ಮಾರುಕಟ್ಟೆಗೆ ಪರಿಚಯಿಸಿದೆ.

ಈ ಹೈಟೆಕ್ ಫೋನ್‌ನ ಬೆಲೆ ಬರೋಬ್ಬರಿ 1.34 ಲಕ್ಷ ರೂ. ಆಗಿದ್ದು ಇದು ತನ್ನದೇ ಆದ ವಿಶಿಷ್ಟ ತಾಂತ್ರಿಕ ವೈಶಿಷ್ಟ್ಯಗಳನ್ನು ಹೊಂದಿದೆ. ನಾವೆಲ್ಲರೂ ಬಳಸುವ ಸಾಮಾನ್ಯ ಸ್ಮಾರ್ಟ್‌ಫೋನ್‌ಗಳು ಮೊಬೈಲ್ ಟವರ್‌ಗಳ ಸಿಗ್ನಲ್ ಆಧರಿಸಿ ಕೆಲಸ ಮಾಡುತ್ತವೆ.

ಆದರೆ ಈ ಸ್ಯಾಟಲೈಟ್ ಫೋನ್ ನೇರವಾಗಿ ಬಾಹ್ಯಾಕಾಶದಲ್ಲಿರುವ ಉಪಗ್ರಹಗಳೊಂದಿಗೆ ಸಂಪರ್ಕ ಸಾಧಿಸುತ್ತದೆ. ಹಾಗಾಗಿ ಇಡೀ ಭಾರತದ ಯಾವುದೇ ಮೂಲೆಯಲ್ಲಿದ್ದರೂ ಉದಾ:ದಟ್ಟ ಅರಣ್ಯ, ಹಿಮಾಲಯದ ಶಿಖರಗಳು ಅಥವಾ ಆಳ ಸಮುದ್ರದಲ್ಲಿ ಇದ್ದರೂ ತಡೆರಹಿತ ನೆಟ್‌ವರ್ಕ್ ಸಿಗುತ್ತದೆ.

ಭೂಕಂಪ, ಸುನಾಮಿ ಅಥವಾ ಭಾರೀ ಪ್ರವಾಹ ಬಂದಾಗ ಮೊಬೈಲ್ ಟವರ್‌ಗಳು ಬಿದ್ದುಹೋಗಿ ಸಂಪರ್ಕ ಕಡಿತಗೊಳ್ಳುತ್ತದೆ. ಇಂತಹ ಸಂದರ್ಭಗಳಲ್ಲಿ ಈ ಸ್ಯಾಟಲೈಟ್ ಫೋನ್ ಜೀವ ರಕ್ಷಕವಾಗಿ ಕೆಲಸ ಮಾಡುತ್ತದೆ. ವಿಪತ್ತು ನಿರ್ವಹಣಾ ತಂಡಗಳು, ಭಾರತೀಯ ಸೇನೆ ಮತ್ತು ಕರಾವಳಿ ರಕ್ಷಣಾ ಪಡೆಗಳಿಗೆ ಇದು ಅತ್ಯಂತ ಸಹಕಾರಿಯಾಗಿದೆ.

ಈ ಸೇವೆಯನ್ನು ಒದಗಿಸಲು ಬಿಎಸ್‌ಎನ್‌ಎಲ್ ಜಾಗತಿಕ ಸ್ಯಾಟಲೈಟ್ ದೈತ್ಯ ಸಂಸ್ಥೆಯಾದ ಇನ್ಮಾರ್‌ಸ್ಯಾಟ್ ಜೊತೆ ಕೈಜೋಡಿಸಿದೆ. ಭಾರತದಲ್ಲಿ ಈ ಸೇವೆಯನ್ನು ಐಎಸ್‌ಪಿಟಿ ಗೇಟ್‌ವೇ ಮೂಲಕ ನಿರ್ವಹಿಸಲಾಗುತ್ತದೆ. ಇದು ಸಂಪೂರ್ಣ ಸುರಕ್ಷಿತ ಮತ್ತು ಗೂಢಚಾರಿಕೆಯಿಂದ ಮುಕ್ತವಾಗಿದೆ.

ಈ ಫೋನ್ ಅತ್ಯಂತ ಕಠಿಣ ಹವಾಮಾನವನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಕೊರೆಯುವ ಚಳಿ, ಮರಳುಗಾಡಿನ ಭಾರಿ ತಾಪಮಾನ ಅಥವಾ ಮಳೆಯಲ್ಲಿಯೂ ಇದು ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸುತ್ತದೆ. ಇದರ ಬ್ಯಾಟರಿ ಬ್ಯಾಕಪ್ ಕೂಡ ಸಾಮಾನ್ಯ ಫೋನ್‌ಗಳಿಗಿಂತ ಹತ್ತು ಪಟ್ಟು ಹೆಚ್ಚಾಗಿರುತ್ತದೆ.

ಸದ್ಯದ ಸುರಕ್ಷತಾ ನಿಯಮಗಳ ಪ್ರಕಾರ, 1.34 ಲಕ್ಷ ರೂ. ಬೆಲೆಯ ಈ ಉಪಗ್ರಹ ಫೋನ್ ಅನ್ನು ಪ್ರಮುಖವಾಗಿ ಸರ್ಕಾರಿ ಸಂಸ್ಥೆಗಳು, ರಕ್ಷಣಾ ಇಲಾಖೆ, ವಿಪತ್ತು ನಿರ್ವಹಣಾ ಮಂಡಳಿಗಳು, ಗಣಿ ಮತ್ತು ತೈಲ ಪರಿಶೋಧನಾ ಕಂಪನಿಗಳು ಹಾಗೂ ಸಮುದ್ರದಲ್ಲಿ ಸಂಚರಿಸುವ ಹಡಗುಗಳ ಸಿಬ್ಬಂದಿಗೆ ನೀಡಲು ಆದ್ಯತೆ ನೀಡಲಾಗಿದೆ.

ಸುರಕ್ಷತೆಯ ದೃಷ್ಟಿಯಿಂದ ಸಾಮಾನ್ಯ ನಾಗರಿಕರು ಇದನ್ನು ಖರೀದಿಸಲು ವಿಶೇಷ ಅನುಮತಿ ಮತ್ತು ಪರವಾನಗಿ ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಪ್ರತ್ಯೇಕ ಪ್ರದೇಶಗಳ ಮೂಲಕ ಪ್ರಯಾಣಿಸುವ ವಲಸೆಗಾರರು ಮತ್ತು ಸಾಹಸ ಪ್ರಯಾಣ ಮಾಡುವವರು ಈ ಫೋನ್‌ ಖರೀದಿಸಬಹುದು.

ಈ ಫೋನ್ ಅನ್ನು ಯಾರು ಬೇಕಾದರೂ ನೇರವಾಗಿ ಖರೀದಿಸಲು ಸಾಧ್ಯವಿಲ್ಲ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಈ ಸಾಧನವನ್ನು ಖರೀದಿಸುವ ಮುನ್ನ ಭಾರತದ ದೂರಸಂಪರ್ಕ ಇಲಾಖೆಯಿಂದ ಕಡ್ಡಾಯವಾಗಿ ಪೂರ್ವಾನುಮತಿ ಅಥವಾ ಮಂಜೂರಾತಿಯನ್ನು ಪಡೆಯಬೇಕು ಎಂದು ಬಿಎಸ್‌ಎನ್‌ಎಲ್ ಸ್ಪಷ್ಟಪಡಿಸಿದೆ. ಅಗತ್ಯ ಅಧಿಕೃತ ಅನುಮತಿ ಇಲ್ಲದೆ ಸ್ಯಾಟಲೈಟ್ ಫೋನ್ ಹೊಂದುವುದು ಅಥವಾ ಅದನ್ನು ಬಳಸುವುದು ಭಾರತೀಯ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಲಿದ್ದು, ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ.

ಸರ್ಕಾರಿ ಪ್ಲಾನ್ G1: 16 ನಿಮಿಷಗಳು/SMS ಉಚಿತದೊಂದಿಗೆ ತಿಂಗಳಿಗೆ 3,500 ರೂ.
ಸರ್ಕಾರಿ ಪ್ಲಾನ್ G2: 30 ನಿಮಿಷಗಳು/SMS ಉಚಿತದೊಂದಿಗೆ ತಿಂಗಳಿಗೆ 5,835 ರೂ.
ವಾಣಿಜ್ಯ ಪ್ಲಾನ್ C1: 60 ನಿಮಿಷಗಳು/SMS ಉಚಿತದೊಂದಿಗೆ ತಿಂಗಳಿಗೆ 11,670 ರೂ.

ಸರ್ಕಾರಿ ಬಳಕೆದಾರರು
ಮಾಸಿಕ ಪ್ಲಾನ್ G1: 20 ಉಚಿತ ನಿಮಿಷಗಳು ಅಥವಾ SMS ಜೊತೆಗೆ 3,500 ರೂ.

ವಾರ್ಷಿಕ ಪ್ಲಾನ್ GA: 240 ಉಚಿತ ನಿಮಿಷಗಳು ಅಥವಾ ವರ್ಷಕ್ಕೆ SMS ಜೊತೆಗೆ 38,500. ರೂ.

ವಾಣಿಜ್ಯ ಬಳಕೆದಾರರು
ಮಾಸಿಕ ಪ್ಲಾನ್ C1: 30 ಉಚಿತ ನಿಮಿಷಗಳು ಅಥವಾ SMS ಜೊತೆಗೆ 5,835 ರೂ.

ವಾರ್ಷಿಕ ಪ್ಲಾನ್ CA: 360 ಉಚಿತ ನಿಮಿಷಗಳು ಅಥವಾ ವರ್ಷಕ್ಕೆ SMS ಜೊತೆಗೆ 64,185 ರೂ.

ಉಚಿತ ನಿಮಿಷಗಳು ಅಥವಾ SMS ಮಿತಿ ಮುಗಿದ ನಂತರ, ಬಳಕೆದಾರರು ಪ್ರತಿ ಹೆಚ್ಚುವರಿ ಕರೆ ನಿಮಿಷ ಅಥವಾ SMS ಮಾಡಿದರೆ ಹೆಚ್ಚುವರಿ ಹಣವನ್ನು ಪಾವತಿಸಬೇಕಾಗುತ್ತದೆ.

ಸರ್ಕಾರಿ ಗ್ರಾಹಕರು: ಪ್ರತಿ ನಿಮಿಷಕ್ಕೆ 18 ರೂ.
ವಾಣಿಜ್ಯ ಗ್ರಾಹಕರು: ಪ್ರತಿ ನಿಮಿಷಕ್ಕೆ 25 ರೂ.

ಈ ಸೇವೆಯನ್ನು ಬಳಸುವುದನ್ನು ಮುಂದುವರಿಸಲು ಪ್ರಿಪೇಯ್ಡ್ ಬಳಕೆದಾರರು ಟಾಪ್-ಅಪ್ ರೀಚಾರ್ಜ್‌ಗಳನ್ನು ಖರೀದಿಸಬಹುದು. ಬಿಎಸ್‌ಎನ್‌ಎಲ್‌ 200, 500, 1,000, 5,000 ಮತ್ತು 10,000 ರೂ. ಗಳ ಟಾಪ್-ಅಪ್‌ಗಳನ್ನು ನೀಡುತ್ತದೆ.

ಈ ಸೇವೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಇಚ್ಛಿಸುವವರು ತಮ್ಮ ಹತ್ತಿರದ ಬಿಎಸ್‌ಎನ್‌ಎಲ್ ಕಚೇರಿಗೆ ಭೇಟಿ ನೀಡಬಹುದು ಅಥವಾ ಆಪರೇಟರ್ ಮೊಬೈಲ್ ಸಂಖ್ಯೆ 97688 66652 ಅನ್ನು ಸಂಪರ್ಕಿಸಬಹುದು.