ಮುಂಬೈ: ಹೂಡಿಕೆದಾರರ ಸಂಪತ್ತು ಒಂದೇ ದಿನ 14 ಲಕ್ಷ ಕೋಟಿ ರೂ. ಹೆಚ್ಚಳವಾಗಿದೆ. ಚುನಾವಣಾ ಫಲಿತಾಂಶ ಪ್ರಕಟವಾಗುವ ಮುನ್ನ ದಿನ ಬಾಂಬೆ ಷೇರು ಮಾರುಕಟ್ಟೆ, ಸಂವೇದಿ ಸೂಚಂಕ್ಯ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ, ಸೂಚಂಕ್ಯ ನಿಫ್ಟಿ, ಸಾರ್ವಕಾಲಿಕ ಎತ್ತರಕ್ಕೆ ಜಿಗಿದು ದಾಖಲೆ ಬರೆದಿದೆ.
ಸೆನ್ಸೆಕ್ಸ್ ಇಂದು ಒಂದೇ ದಿನ ಬರೋಬ್ಬರಿ 2,507.47 ಅಂಶ ಏರಿಕೆಯಾಗಿ ಅಂತಿಮವಾಗಿ 76,468.78 ರಲ್ಲಿ ಕೊನೆಯಾಯಿತು. ನಿಫ್ಟಿ 733 ಅಂಶ ಏರಿಕೆಯಾಗಿ 23,263.90 ರಲ್ಲಿ ಇಂದಿನ ವಹಿವಾಟನ್ನು ಮುಗಿಸಿತು.
ಮೂರು ವರ್ಷದ ಬಳಿಕ ಸೆನ್ಸೆಕ್ಸ್ ಮತ್ತು ನಿಫ್ಟಿ 50 ಭರ್ಜರಿ ಏರಿಕೆ ಕಂಡಿದೆ. ಸರ್ಕಾರಿ ಸ್ವಾಮ್ಯದ ಕಂಪನಿಗಳು, ಬ್ಯಾಂಕ್‌ಗಳು, ಅದಾನಿ ಕಂಪನಿಗಳು ಸೇರಿದಂತೆ ಬಹುತೇಕ ಕಂಪನಿಗಳ ಷೇರು ಬೆಲೆಗಳು ಏರಿಕೆ ಕಂಡಿವೆ.
ಸತತ ಮೂರನೇ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಏರಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದ ಹಿನ್ನೆಲೆಯಲ್ಲಿ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿದ ಪರಿಣಾಮ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆ ಕಂಡಿದೆ.
ಈ ಹಿಂದೆಯೂ ವಿಧಾನಸಭಾ ಚುನಾವಣೆಗಳ ಫಲಿತಾಂಶದ ದಿನ ಬಿಜೆಪಿ ಜಯಗಳಿಸಿದ ಸಮಯದಲ್ಲೂ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆ ಕಂಡಿತ್ತು. ಆದರೆ ಇಷ್ಟೊಂದು ಪ್ರಮಾಣದಲ್ಲಿ ಏರಿಕೆ ಕಂಡಿರಲಿಲ್ಲ.
ಮೇ ತಿಂಗಳಲ್ಲಿ 1.73 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹಿಸಿತ್ತು. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ 10% ಏರಿಕೆಯಾಗಿತ್ತು. ಈ ಎಲ್ಲಾ ಕಾರಣದಿಂದ ದೇಶದಲ್ಲಿರುವ ಹೂಡಿಕೆದಾರರು ಮತ್ತು ವಿದೇಶದ ಸಾಂಸ್ಥಿಕ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ.

