ಮಂಗಳೂರು: ಅಡಿಕೆ ಬೆಳೆಗಾರರ ಹಿತ ರಕ್ಷಕ, ಬಹುರಾಜ್ಯ ಸಹಕಾರ ಸಂಸ್ಥೆ- ಕ್ಯಾಂಪ್ಕೊ, ಮಂಗಳೂರಿನ ಯೆನೆಪೋಯಾ ವಿಶ್ವವಿದ್ಯಾಲಯ ಅಡಿಕೆಯ ಮೇಲೆ ಸಂಶೋಧನಾಧಾರಿತ ಅಧ್ಯಯನ ನಡೆಸಿ ಸಲ್ಲಿಸಿದ ವರದಿಯನ್ನು ಸ್ವಾಗತಿಸಿದೆ. ಈ ಅಧ್ಯಯನದಲ್ಲಿ ಅಡಿಕೆ ಸಾರಗಳು ಶಕ್ತಿಶಾಲಿ ಕ್ಯಾನ್ಸರ್ ಪ್ರತಿಬಂಧಕ ಗುಣಗಳನ್ನು ಹೊಂದಿವೆ ಎಂಬ ಮಹತ್ವದ ನಿರ್ಧಾರಕ್ಕೆ ಬರಲಾಗಿದೆ.
ಕ್ಯಾಂಪ್ಕೊ ಅಧ್ಯಕ್ಷ ಎ. ಕಿಶೋರ್ ಕುಮಾರ್ ಕೊಡ್ಗಿ ಅವರು ಯನೆಪೋಯಾ ವಿಶ್ವವಿದ್ಯಾಲಯ ಈ ಮಹತ್ವದ ಅಧ್ಯಯನ ಕೈಗೊಂಡಿರುವುದನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿ ಶ್ಲಾಘಿಸಿದ್ದಾರೆ.ಅಧ್ಯಯನದ ಪ್ರಕಾರ, ಅಡಿಕೆಯ ಸಾರಗಳು ಕ್ಯಾನ್ಸರ್ ಕೋಶಗಳ ವೃದ್ಧಿ, ಚಲನೆ ಮತ್ತು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯುತ್ತವೆ ಹಾಗೂ ಇದು ಸಾಮಾನ್ಯ ಕೋಶಗಳಿಗೆ ಹಾನಿಯನ್ನುಂಟು ಮಾಡುವುದಿಲ್ಲ. ಈ ಮಹತ್ವದ ಫಲಿತಾಂಶವು, ಸಂಪ್ರದಾಯಕವಾಗಿ ಸಂಸ್ಕರಿಸಿದ ಅಡಿಕೆಯನ್ನು ಬಳಸಿದರೆ ಆರೋಗ್ಯದಾಯಕ ಲಾಭಗಳಿವೆ ಎಂಬ ಜನಸಾಮಾನ್ಯರ ನಂಬಿಕೆಗೆ ವೈಜ್ಞಾನಿಕ ಸಾಕ್ಷ್ಯಾಧಾರವನ್ನು ಒದಗಿಸಿದಂತಾಗಿದೆ.
ಈ ಅಧ್ಯಯನವು ವಿಶ್ವ ಆರೋಗ್ಯ ಸಂಸ್ಥೆಯು ಇತ್ತೀಚೆಗೆ ಅಡಿಕೆಯನ್ನು ಕ್ಯಾನ್ಸರ್ ಕಾರಕ ಎಂದು ವರ್ಗೀಕರಿಸಿರುವುದು ಕಪೋಲ ಕಲ್ಪಿತ ಎಂಬ ಕ್ಯಾಂಪ್ಕೊ ದ ಪ್ರತಿಪಾದನೆಗೆ ಪ್ರಬಲವಾದ ಪುರಾವೆ ಲಭಿಸಿದಂತಾಗಿದೆ. ಪ್ರತಿಷ್ಠಿತ ಸಂಸ್ಥೆಗಳ ಈ ರೀತಿಯ ಸಂಶೋಧನೆ ಆಧಾರಿತ ನಿರ್ಧಾರಗಳು ಅಡಿಕೆಯ ಕುರಿತು ಸಮತೋಲನದ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಪುಷ್ಟಿಕರಿಸಲು ಸಹಾಯ ಮಾಡುತ್ತವೆ.
ಈ ಹಿಂದೆ ನಿಟ್ಟೆ ವಿಶ್ವವಿದ್ಯಾಲಯ ಮತ್ತು ಇತರ ಹಲವಾರು ಪ್ರತಿಷ್ಟಿತ ವೈಜ್ಞಾನಿಕ ಸಂಸ್ಥೆಗಳ ಅಧ್ಯಯನಳು ಕೂಡ ಅಡಿಕೆಯು ಕ್ಯಾನ್ಸರ್ ಕಾರಕವಲ್ಲ ಬದಲಾಗಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ ಎಂಬುದನ್ನು ಸಾಬೀತು ಪಡಿಸಿವೆ. ಇದರಿಂದ ಬೆಳೆಗೆ ಇರುವ ಸಾಂಸ್ಕೃತಿಕ ಮತ್ತು ಪರಂಪರಾತ್ಮಕ ಮಹತ್ವವನ್ನು ರುಜುವಾತು ಆಗಿದೆ.
ಈ ರೀತಿಯ ವೈಜ್ಞಾನಿಕ ದೃಢೀಕರಣಗಳು ಲಕ್ಷಾಂತರ ಅಡಿಕೆ ಬೆಳೆಗಾರರ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಉತ್ಪನ್ನದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ ಎಂದು ಕ್ಯಾಂಪ್ಕೊ ನಂಬಿದೆ. ಸಂಶೋಧನೆ ನಡೆಸಿರುವ ಯನೆಪೋಯ ವಿಶ್ವವುದ್ಯಾಲಯದ ವಿಜ್ಞಾನಿಗಳು ಮತ್ತು ಸಂಸ್ಥೆಯ ಆಡಳಿತಕ್ಕೆ ಕ್ಯಾಂಪ್ಕೊ ಗೌರವಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.

