ಬಂಟ್ವಾಳ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಹಾಗೂ ಪ್ರಾದೇಶಿಕ ಘಟಕಗಳ ಸಹಯೋಗ ದೊಂದಿಗೆ ಬಂಟ್ವಾಳ ಶಾಸಕ ರಾಜೇಶ್ ನ್ಯಾಕ್ ಮತ್ತು ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ವೈ.ಭರತ್ ಶೆಟ್ಟಿ ಅವರ ನೇತೃತ್ವದಲ್ಲಿ ‘ಯಕ್ಷದ್ರುವ ವಿದ್ಯಾರ್ಥಿ ಸಮ್ಮಿಲನ-25’ ಕಾರ್ಯಕ್ರಮ ಜ. 8 ರಂದು ಗಂಜಿಮಠದ ಒಡ್ಡೂರು ಫಾರ್ಮ್‌ ಹೌಸ್‌ನಲ್ಲಿ ಜರಗಲಿದೆ.

ಯಕ್ಷಧ್ರುವ – ಯಕ್ಷಶಿಕ್ಷಣದಲ್ಲಿ ತರಬೇತಿ ಪಡೆದ ಸುಮಾರು 1000 ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ರಂಗ ಪ್ರವೇಶ ಮಾಡಲಿದ್ದಾರೆ. ಬಂಟ್ವಾಳ ಕ್ಷೇತ್ರದ 10 ಹಾಗೂ ಮಂಗಳೂರುನಗರ ಉತ್ತರ ಕ್ಷೇತ್ರದ 11 ಸರಕಾರಿ ಶಾಲೆಯ ವಿದ್ಯಾರ್ಥಿಗಳು ಪ್ರತ್ಯೇಕ ಪ್ರತ್ಯೇಕವಾದ ಎರಡು ರಂಗಸ್ಥಳದಲ್ಲಿ ತಮ್ಮ ಪ್ರದರ್ಶನ ನೀಡಲಿದ್ದಾರೆ.

ಕೀರ್ತಿಶೇಷ ಮಿಜಾರುಗುತ್ತು ಆನಂದ ಆಳ್ವ ವೇದಿಕೆಯಲ್ಲಿ ಬಂಟ್ವಾಳ ಕ್ಷೇತ್ರದ 10 ಶಾಲೆಯ ವಿದ್ಯಾರ್ಥಿಗಳು ಹಾಗೂ ಕೀರ್ತಿಶೇಷ ಡಾ. ವೈ. ಚಂದ್ರಶೇಖರ ಶೆಟ್ಟಿ ವೇದಿಕೆಯಲ್ಲಿ ಉತ್ತರ ಕ್ಷೇತ್ರದ 11 ಶಾಲೆಗಳ ವಿದ್ಯಾರ್ಥಿಗಳು ರಂಗಪ್ರವೇಶ ಮಾಡಲಿದ್ದಾರೆ.

ಬೆಳಿಗ್ಗೆ 8.40 ರಿಂದ 8.50 ರವರೆಗೆ ಏಕಕಾಲದಲ್ಲಿ ಚೌಕಿ ಪೂಜೆ ನಡೆದು ಬಳಿಕ ಶಾಸಕರುಗಳಾದ ರಾಜೇಶ್ ನ್ಯಾಕ್ ಉಳಿಪಾಡಿ ಮತ್ತು ಡಾ.ವೈ. ಭರತ್ ಶೆಟ್ಟಿಯವರು ಉದ್ಘಾಟಿಸುವ ಮೂಲಕ ಯಕ್ಷದ್ರುವ ವಿದ್ಯಾರ್ಥಿ ಸಮ್ಮಿಲನ-25 ಕ್ಕೆ ಚಾಲನೆ ನೀಡಲಿದ್ದಾರೆ.

ಸಂಜೆ 5 ಗಂಟೆಗೆ ಯಕ್ಷದ್ರುವ ಪಟ್ಲ ಬಂಟ್ವಾಳ ಘಟಕದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಅವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದು, ವಿವಿಧ ಘಟಕಗಳ ಅಧ್ಯಕ್ಷರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.