ಮಂಗಳೂರು: ಗೋಸೇವಾ ಗತಿವಿಧಿ ಮತ್ತು ಗವ್ಯ ಉತ್ಪನ್ನಗಳ ಮಾರುಕಟ್ಟೆ ಆಯಾಮ ಮಂಗಳೂರು ವಿಭಾಗದಿಂದ ಗೋವಿನಿಂದ ನನಗೇನು? ಗೋವಿಗಾಗಿ ನಾನೇನು ಮಾಡಬಹುದು ವಿಷಯದಲ್ಲಿ ಬಿ ಫಾರ್ಮ್ ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದೆ.
ಕಾಲೇಜಿನ ಪ್ರಾಂಶುಪಾಲರು, ಶ್ರೀಯುತ ಗುರುರಾಜ್ ಎಂ. ಪಿ.ಅವರು ಪಂಚಗವ್ಯ ಘೃತ, ಗೋಮೂತ್ರ, ಗೋಮಯಗಳ ಔಷಧೀಯ ಮಹತ್ವ ಹಾಗೂ ಅವುಗಳ ಬಗ್ಗೆ ಪ್ರಕಟಗೊಂಡಿರುವ ವೈಜ್ಞಾನಿಕ ಲೇಖನಗಳ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ತಮ್ಮ ಬಳಿ ಆ ರೀತಿಯ ಸಾಕಷ್ಟು ಬರಹಗಳ ಸಂಗ್ರಹ ಇದ್ದು, ಆಸಕ್ತ ವಿದ್ಯಾರ್ಥಿಗಳು ಅದನ್ನು ಪಡೆದು ಅಧ್ಯಯನ ನಡೆಸಬಹುದು ಎಂದರು. ಮುಂದಿನ ದಿನಗಳಲ್ಲಿ ಶೈಕ್ಷಣಿಕ ಅಧ್ಯಯನದ ಭಾಗವಾಗಿ, ಇದೇ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಪ್ರೊಜೆಕ್ಟ್ ವರ್ಕ್ ಮಾಡಬಹುದು ಅಂತ ಕಿವಿಮಾತು ಹೇಳಿದರು.
ಗವ್ಯ ಉತ್ಪನ್ನಗಳ ಮಾರುಕಟ್ಟೆ ಆಯಾಮ ಪ್ರಮುಖ್, ಅಶೋಕ ಇಳಂತಿಲ ಪ್ರಾಸ್ತವಿಕ ಮಾತುಗಳನ್ನಾಡಿ, ಕಾರ್ಯಕ್ರಮದ ಆಯೋಜನೆಯ ಉದ್ದೇಶವನ್ನು ವಿವರಿಸಿದರು. ಗೋಸೇವಾ ಗತಿವಿಧಿ, ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕರಾದ ಶ್ರೀಯುತ ಪ್ರವೀಣ್ ಸರಳಾಯರು ಸ್ವದೇಶಿ ಗೋವುಗಳು ನಡೆದಾಡುವ ಔಷಧಾಲಯ ಅನ್ನುವ ವಿಚಾರವನ್ನು ಅನೇಕ ಘಟನೆಗಳ ಮೂಲಕ ವಿವರಿಸಿದರು.
ಮಾನವ ಸಂಪತ್ತು, ಮಣ್ಣಿನ ಸಂಪತ್ತು, ನೀರಿನ ಸಂಪತ್ತು, ಅರಣ್ಯ ಸಂಪತ್ತು, ಜೀವವೈವಿಧ್ಯ ಸಂಪತ್ತು, ಆರೋಗ್ಯ ಸಂಪತ್ತು ಉಳಿಸಿ ಬೆಳೆಸುವಲ್ಲಿ ಗೋವಿನ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು. ರಾಧಾ ಸುರಭಿ ಗೋಮಂದಿರದ ಶ್ರೀಯುತ ಶ್ರೀ ಭಕ್ತಿ ಭೂಷಣ್ ದಾಸ್ ಅವರು ಪುರಾಣ, ಮಹಾಭಾರತ ಭಗವದ್ಗೀತೆ ಗಳನ್ನು ಉಲ್ಲೇಖಿಸಿ ಗೋವಿನ ಮಹಾನತೆಯನ್ನು ತೆರೆದಿಟ್ಟರು.
ಗೋವಿನ ಕೃಪೆಯಿಂದ, ಪಂಚಗವ್ಯ ಔಷಧಿಗಳಿಂದ ಅನೇಕ ತೀವ್ರ ರೋಗಗಳನ್ನು ನಿವಾರಣೆ ಮಾಡಿದ ಅನುಭವಗಳನ್ನು ಹಂಚಿಕೊಂಡರು ಗೋವಿನ ಪಾವಿತ್ರತೆಯನ್ನು ವಿವರಿಸಿದರು. ಗವ್ಯ ಉತ್ಪನ್ನಗಳನ್ನು ಆಯುರ್ವೇದದ ಔಷಧಿಯ ರೂಪದಲ್ಲಿ ಉಪಯೋಗಿಸುವುದರಿಂದ ನಮ್ಮ ಆರೋಗ್ಯಕ್ಕೆ ಏನೇನು ಲಾಭಗಳಿವೆ ಅನ್ನೋದನ್ನ ತಿಳಿಸಿಕೊಟ್ಟರು.
ಗೊಸೇವಾ ಗತಿವಿಧಿ, ಮಂಗಳೂರು ವಿಭಾಗ ಸಂಯೋಜಕರಾದ ಗಂಗಾಧರ್ ಪೆರ್ಮಂಕಿ, ಪುತ್ತೂರು ಜಿಲ್ಲಾ ಸಂಯೋಜಕ್ ನಿರಂಜನ್ ಕುಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಕಾಲೇಜಿನ 120 ಬಿ ಫಾರ್ಮ್ ವಿದ್ಯಾರ್ಥಿಗಳು ಮತ್ತು 10 ಅಧ್ಯಾಪಕವೃಂದದವರು ಭಾಗವಹಿಸಿದ್ದರು.
-ಅಶೋಕ ಇಳಂತಿಲ
ಮಂಗಳೂರು ವಿಭಾಗ ಗವ್ಯ ಉತ್ಪನ್ನ ಮಾರುಕಟ್ಟೆ ಆಯಾಮ

