ಮಂಗಳೂರು: “ಎಸ್ಐಆರ್ ನೆಪದಲ್ಲಿ ಪ್ರತಿಪಕ್ಷಗಳು ದೇಶದಲ್ಲಿ ಬೆಂಕಿ ಹಚ್ಚಲು ಯತ್ನಿಸಿವೆ, ಅದರ ಬಿಸಿಯನ್ನು ನಾವು ಸ್ವೀಕರಿಸಿದ್ದೇವೆ. ಈಗ ನಿಮ್ಮನ್ನು ಹಾಗೂ ನಿಮ್ಮ ದುರುದ್ದೇಶಗಳನ್ನು ಸಂಪೂರ್ಣವಾಗಿ ಸುಟ್ಟುಹಾಕುತ್ತೇವೆ. ಇದು ಕೇವಲ ಆರಂಭವಷ್ಟೇ” ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಅವರು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

​ಬಿಜೆಪಿ ಮಂಗಳೂರು ವಿಭಾಗ (ದಕ್ಷಿಣ ಕನ್ನಡ ಮತ್ತು ಉಡುಪಿ) ವತಿಯಿಂದ ನಗರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ “ಪ್ರಜಾಪ್ರಭುತ್ವವನ್ನು ಉಳಿಸಿ, ಅರಾಜಕತೆ ಅಳಿಸಿ” ಬೃಹತ್ ಪಾದಯಾತ್ರೆ ಹಾಗೂ ಸಾರ್ವಜನಿಕ ಸಮಾವೇಶದಲ್ಲಿ ಅವರು ಮಾತನಾಡಿದರು.

ದೇಶದ ಸಂವಿಧಾನಾತ್ಮಕ ಚೌಕಟ್ಟನ್ನು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ವಿರೋಧ ಪಕ್ಷಗಳು ಧ್ವಂಸಗೊಳಿಸಲು ಯತ್ನಿಸುತ್ತಿವೆ. ದೇಶದ ಅಭಿವೃದ್ಧಿ, ಸಮೃದ್ಧಿ ಹಾಗೂ ಸನಾತನ ಧರ್ಮದ ಮೂಲತತ್ವಕ್ಕೆ ಅಡ್ಡಿಪಡಿಸುತ್ತಿರುವವರನ್ನು ದೇಶದ್ರೋಹಿಗಳು ಎಂದೇ ಕರೆಯಬೇಕಿದೆ ಎಂದರು.

ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸವಾಲೆಸೆದ ಸುರೇಶ್ ಗೋಪಿ, ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಿಗೂ ಹೋಗುವುದಿಲ್ಲ. ಇಲ್ಲೇ ಇರುತ್ತಾರೆ, ದೇಶವನ್ನು ಮುನ್ನಡೆಸುತ್ತಾರೆ. ಹೋಗುವುದಿದ್ದರೆ ವಿರೋಧ ಪಕ್ಷದ ನಾಯಕರು, ಅವರ ಕುಟುಂಬಗಳು ಮತ್ತು ಅವರ ‘ಬಾಸ್’ಗಳ ಕುಟುಂಬಗಳು ರಾಜಕೀಯವಾಗಿ ಅಳಿದು ಹೋಗುತ್ತವೆ, ಇಲ್ಲವೇ ಅರಬ್ಬೀ ಸಮುದ್ರಕ್ಕೆ ತಳ್ಳಲ್ಪಡುತ್ತವೆ ಎಂದು ವಾಗ್ದಾಳಿ ನಡೆಸಿದರು.