ಮಂಗಳೂರು: ಕರಾವಳಿ ಭಾಗದಲ್ಲಿ ಆನೆಗಳ ದಾಳಿ ಸಮಸ್ಯೆ ಇದ್ದು. ಇದೀಗ ಆನೆಗಳ ದಾಳಿಯನ್ನು ತಡೆಯುವುದಕ್ಕಾಗಿ ಆನೆ ಕಾರ್ಯಪಡೆ ಮಾಡಿದ್ದೇವೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ದಿ ಮಂಡಳಿ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ನಡೆದ ಕರ್ನಾಟಕ ಹಕ್ಕಿ ಹಬ್ಬ ಉದ್ಘಾಟಿಸಿ ಮಾತನಾಡಿದ ಅವರು ಮಾನವ – ಪ್ರಾಣಿ ಸಂಘರ್ಷ ತಡೆಯಲು ಮತ್ತು ಈ ಬಗ್ಗೆ ರಾಜ್ಯಾದ್ಯಂತ ನಿಗಾ ವಹಿಸಲು ಕಮಾಂಡ್ ಸೆಂಟರ್ ಸ್ಥಾಪನೆ ಮಾಡಿದ್ದೇವೆ.

ಯಾವುದೇ ಭಾಗದಿಂದ 1926 ಸಂಖ್ಯೆಗೆ ಕರೆ ಮಾಡಿದರೂ ತಕ್ಷಣ ಕಾರ್ಯ ಪ್ರವೃತ್ತರಾಗಲು ವ್ಯವಸ್ಥೆ ಮಾಡಿದ್ದೇವೆ. ಇದನ್ನು ಈಗಾಗಲೇ ಬೆಂಗಳೂರಿನಲ್ಲಿ ಚಾಲನೆ ನೀಡಿದ್ದೇವೆ ಎಂದು ಅರಣ್ಯ, ಪರಿಸರ ಖಾತೆ ಸಚಿವ ಈಶ್ವರ್ ಬಿ. ಖಂಡ್ರೆ ಹೇಳಿದ್ದಾರೆ.
ಮಂಗಳೂರಿನಲ್ಲಿ ಆನೆಗಳ ಸಮಸ್ಯೆ ಇದೆ. ಇದರ ಬಗ್ಗೆ ಇಲ್ಲಿನ ಐವಾನ್ ಡಿಸೋಜ ಸೇರಿ ಈ ಭಾಗದ ಜನಪ್ರತಿನಿಧಿಗಳು ವಿಧಾನ ಪರಿಷತ್ತಿನಲ್ಲಿ ಪ್ರಶ್ನೆಗಳನ್ನು ಕೇಳಿದ್ದರು. ಆನೆಗಳ ದಾಳಿಯನ್ನು ತಡೆಯುವುದಕ್ಕಾಗಿ ಆನೆ ಕಾರ್ಯಪಡೆ ಮಾಡಿದ್ದೇವೆ ಎಂದರು.
ಕುದುರೆಮುಖ ಭಾಗದಲ್ಲಿ ಅರಣ್ಯ ವಾಸಿಗಳನ್ನು ಸ್ಥಳಾಂತರ ಮಾಡಲು ಯೋಜನೆ ಮಾಡಿದ್ದೇವೆ. ಸದ್ಯ 300ಕ್ಕೂ ಅಧಿಕ ಕುಟುಂಬಗಳು ಇದ್ದು ಅವರನ್ನು ಶೀಘ್ರದಲ್ಲೇ ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

