ಮಂಗಳೂರು: ಮುಂದಿನ ಒಂದೂವರೆ ತಿಂಗಳಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಭೋಗಿಗಳು ಬರಲಿದ್ದು, ಒಂದನ್ನು ಮಂಗಳೂರಿಗೂ ನೀಡಲಾಗುವುದು ಎಂದು ಕೇಂದ್ರ ರೈಲ್ವೇ ಇಲಾಖೆಯ ರಾಜ್ಯ ಸಚಿವರಾದ ವಿ. ಸೋಮಣ್ಣ ತಿಳಿಸಿದ್ದಾರೆ.
ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಶನಿವಾರ ಮಂಗಳೂರು ಸೆಂಟ್ರಲ್- ಕಬಕ ಪುತ್ತೂರು- ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲಿನ ಸುಬ್ರಹ್ಮಣ್ಯ ರೋಡ್ ನಿಲ್ದಾಣದವರೆಗಿನ ವಿಸ್ತರಣೆಗೆ ಹಸಿರು ನಿಶಾನೆ ನೀಡಿ ಅವರು ಮಾತನಾಡಿದರು.
ಕರಾವಳಿ ಭಾಗದ ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣದ ಅಭಿವೃದ್ಧಿ ಕಾರ್ಯ 19 ಕೋಟಿ ರೂ.ಗಳಲ್ಲಿ ನಡೆಯುತ್ತಿದ್ದು, ಈಗಾಗಲೇ ಶೇ. 85ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಆಗಸ್ಟ್‌ನೊಳಗೆ ಸಂಪೂರ್ಣ ಕಾಮಗಾರಿ ಮುಕ್ತಾಯವಾಗಲಿದೆ.
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ವಿಶ್ವದರ್ಜೆಗೇರಿಸುವ ಮಾಸ್ಟರ್ ಪ್ಲಾನ್ ತಯಾರಾಗಿದ್ದು, ಟೆಂಡರ್ ಕರೆದು ಎರಡು ವರ್ಷಗಳಲ್ಲಿ ಲೋಕಾರ್ಪಣೆಯಾಗಲಿದೆ ಎಂದವರು ಹೇಳಿದರು. ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ನಗರ ಅಭಿವೃದ್ಧಿಗೆ ಸಂವಹನದ ಜತೆಗೆ ಸಂಪರ್ಕ ವ್ಯವಸ್ಥೆ ಉತ್ತಮವಾಗಿರಬೇಕು. ಈ ನಿಟ್ಟಿನಲ್ಲಿ ಪುಣ್ಯ ಕ್ಷೇತ್ರವಾದ ಸುಬ್ರಹ್ಮಣ್ಯಕ್ಕೆ ರೈಲು ಸಂಚಾರ ವಿಸ್ತರಿಸುವ ಮೂಲಕ ಉತ್ತಮ ಕಾರ್ಯವಾಗಿದೆ ಎಂದರು.
ಸಂಸದ ಬ್ರಿಜೇಶ್ ಚೌಟ ಮಾತನಾಡಿ, ಹೊಸ ರೈಲುಗಳು ಜಿಲ್ಲೆಗೆ ಬರುವುದು ದುಸ್ತರ ಎನ್ನುವ ಸಂದರ್ಭದಲ್ಲಿಯೇ ಮಂಗಳೂರು ಕಬಕ ಪುತ್ತೂರು ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯಕ್ಕೆ ವಿಸ್ತರಿಸಲು ಸಚಿವ ಸೋಮಣ್ಣ ರವರ ಮುತುವರ್ಜಿಯಿಂದ ಸಾಧ್ಯವಾಗಿದೆ. ಹಳಿಯ ವಿದ್ಯುದೀಕರಣ ಸಂಪೂರ್ಣಗೊಂಡ ಬಳಿಕ ಇದನ್ನು ಮೆಮೋ ರೈಲು ಆಗಿ ಪರಿವರ್ತನೆಗೊಳಿಸಬೇಕು ಎಂದರು.
ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಭಗೀರಥಿ ಮುರಳ್ಯ, ಮಾಜಿ ಶಾಸಕರಾದ ಸಂಜೀವ ಮಠಂದೂರು, ನಾಗರಾಜ ಶೆಟ್ಟಿ, ಪಾಲ್ಘಾಟ್ ವಿಭಾಗದ ಡಿಆರ್‌ಎಂ ಅರುಣ್ ಕುಮಾರ್ ಚತುರ್ವೇದಿ ಮೊದಲಾದವರು ಉಪಸ್ಥಿತರಿದ್ದರು.

