ಮಂಗಳೂರು: ಕರಾವಳಿ ಭಾಗದ ಜನರ ದಶಕಗಳ ಬೇಡಿಕೆಯಾಗಿದ್ದ ಬೆಂಗಳೂರು-ಮಂಗಳೂರು ನಡುವಿನ ವೇಗದ ರೈಲು ಸಂಚಾರದ ಕನಸಿಗೆ ಈಗ ‘ವಂದೇ ಭಾರತ್’ ರೂಪದಲ್ಲಿ ಹೊಸ ಆಯಾಮ ಸಿಕ್ಕಿತ್ತು. ಆದರೆ, ಇತ್ತೀಚೆಗೆ ದಕ್ಷಿಣ ಪಶ್ಚಿಮ ರೈಲ್ವೆ ಬಿಡುಗಡೆ ಮಾಡಿರುವ ಯಶವಂತಪುರ-ಮಡಗಾಂವ್ ವಂದೇ ಭಾರತ್ ರೈಲಿನ ಪ್ರಸ್ತಾವಿತ ವೇಳಾಪಟ್ಟಿ ಕರಾವಳಿ ಜನರಲ್ಲಿ ಅತೀವ ನಿರಾಸೆ ಮತ್ತು ಆಕ್ರೋಶವನ್ನು ಮೂಡಿಸಿದೆ.
ಈ ರೈಲು ಯಶವಂತಪುರದಿಂದ ಹೊರಟು ಹಾಸನ, ಸಕಲೇಶಪುರ ಮಾರ್ಗವಾಗಿ ಪಡೀಲ್ ಮೂಲಕ ಹಾದುಹೋಗಲಿದ್ದರೂ, ದಕ್ಷಿಣ ಕನ್ನಡದ ಜಿಲ್ಲಾ ಕೇಂದ್ರವಾದ ಮಂಗಳೂರಿನಲ್ಲಿ (ಮಂಗಳೂರು ಜಂಕ್ಷನ್ ಅಥವಾ ಸೆಂಟ್ರಲ್) ಯಾವುದೇ ನಿಲುಗಡೆಯನ್ನು ನೀಡಿಲ್ಲ. ಅಚ್ಚರಿಯ ವಿಷಯವೆಂದರೆ, ಉಡುಪಿ ಮತ್ತು ಕಾರವಾರದಂತಹ ಪ್ರಮುಖ ಪ್ರವಾಸಿ ಹಾಗೂ ವಾಣಿಜ್ಯ ಕೇಂದ್ರಗಳನ್ನೂ ಈ ರೈಲು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಕೇವಲ ಸುಬ್ರಹ್ಮಣ್ಯ ರಸ್ತೆ ನಿಲ್ದಾಣಕ್ಕೆ ಮಾತ್ರ ನಿಲುಗಡೆ ನೀಡಿರುವುದು ಕರಾವಳಿಗರ ಪಾಲಿಗೆ “ಹೆಸರಿಗಷ್ಟೇ ಕರಾವಳಿ ಮಾರ್ಗ” ಎಂಬಂತಾಗಿದೆ.
ಈ ಕುರಿತು ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಸಮಿತಿ ಅಧ್ಯಕ್ಷ ಹನುಮಂತ ಕಾಮತ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ನೀಡುವುದಾಗಿ ನಂಬಿಸಿ, ಈಗ ಕೇವಲ ಗೋವಾ ಸಂಪರ್ಕಕ್ಕೆ ಆದ್ಯತೆ ನೀಡಿರುವುದು ಜಿಲ್ಲೆಯ ಜನರಿಗೆ ಮಾಡುತ್ತಿರುವ ಅನ್ಯಾಯ ಎಂದು ಅವರು ಕಿಡಿಕಾರಿದ್ದಾರೆ.
ಅಲ್ಲದೆ, ಈ ಹೊಸ ರೈಲಿನ ಸಂಚಾರದಿಂದಾಗಿ ಈಗಿರುವ ಸಾಮಾನ್ಯ ರೈಲುಗಳ ವೇಳಾಪಟ್ಟಿಗೂ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದೆ. ರೈಲ್ವೆ ಇಲಾಖೆಯು ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸುವ ಮೊದಲು ಸ್ಥಳೀಯರ ಬೇಡಿಕೆಗಳನ್ನು ಪರಿಗಣಿಸಿ, ಮಂಗಳೂರು, ಉಡುಪಿ ಮತ್ತು ಕಾರವಾರದಲ್ಲಿ ನಿಲುಗಡೆ ನೀಡಬೇಕು ಎಂಬ ಬಲವಾದ ಒತ್ತಾಯ ಕೇಳಿಬಂದಿದೆ.

