ಮಂಗಳೂರು: ಉಳ್ಳಾಲದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರಾದ ವಿಕ್ರಂ ರಾಜ್ ಮತ್ತು ಅಶ್ವಿನ್ ಕುಟಿನ್ಹಾ ಇವರ ಕರ್ನಾಟಕ ಉಚ್ಚ ನ್ಯಾಯಾಲಯದ ಮುಂದೆ, ಮಂಗಳೂರಿನ ವಿವಿಧ ಭಾಗದ CCTV ದೃಶ್ಯಾವಳಿಗಳನ್ನು ಪಡೆದು, ಸಂರಕ್ಷಿಸುವಂತೆ ಮತ್ತು ಮಂಗಳೂರಿನ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಪೊಲೀಸ್ ಕಮಿಷನರ್ ಅವರಿಗೆ ನಿರ್ದೇಶಿಸುವಂತೆ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದು, ಮಾನ್ಯ ಉಚ್ಚ ನ್ಯಾಯಾಲಯವು ಸದರಿ ಸಿಸಿಟಿವಿ ವಿಡಿಯೋಗಳನ್ನು ಪಡೆದು, ಸಂರಕ್ಷಿಸುವಂತೆ ಮಧ್ಯಂತರ ಆದೇಶವನ್ನು ಇಂದು ಹೊರಡಿಸಿದೆ.
ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯದಲ್ಲಿ ಹಲವಾರು ನಾಟಕೀಯ ಬೆಳವಣಿಗೆಗಳು ನಡೆದಿದೆ ಮೂರನೇ ಆರೋಪಿಯ ಪರ ವಕೀಲರು ದಿನಾಂಕ 19/04/2025 ರಂದು 3 ನೇ ಆರೋಪಿಯು ಕೃತ್ಯ ನಡೆದ ಸ್ಥಳದಲ್ಲಿ (ಉಳ್ಳಾಲ) ಮೂರನೇ ಆರೋಪಿ ಇರಲಿಲ್ಲ, ಕೃತ್ಯ ನಡೆಯಲಾಗಿದೆ ಎಂದು ಹೇಳಲಾದ ಸಮಯದಲ್ಲಿ ಆತ ಲಾಲ್ಭಾಗ್ ಪ್ರದೇಶದಲ್ಲಿ ಇದ್ದ,
ಆದುದ್ದರಿಂದ ಆತ ಓಡಾಡಿದ ಲಾಲ್ ಬಾಗ್ ಪ್ರದೇಶದ CCTV ದೃಶ್ಯಾವಳಿಗಳನ್ನು ಸಂರಕ್ಷಿಸುವಂತೆ ಮತ್ತು ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಪೊಲೀಸ್ ಕಮಿಷನರ್ ಅವರಿಗೆ ನಿರ್ದೇಶಿಸುವಂತೆ ಕೋರಿ ಮಾನ್ಯ ನ್ಯಾಯಾಲಯದ ಮುಂದೆ ಹಾಕಿದ್ದ ಅರ್ಜಿಗೆ ಸರಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದ್ದು ಸದರಿ ಆಕ್ಷೇಪಣೆಯಲ್ಲಿ ಮೂರನೇ ಆರೋಪಿ ಉಳ್ಳಾಲಕ್ಕೆ ಹೋಗಿಲ್ಲ , ಅತ್ಯಾಚಾರದಲ್ಲಿ ಭಾಗಿಯಾಗಿಲ್ಲ ಎನ್ನುವ ಸಂಗತಿ ಹೊರಬಂದಿದೆ.
ಪೊಲೀಸರು ಹೇರಿದ ಹೊಸ ಆರೋಪದ ಪ್ರಕಾರ ಮೂರನೇ ಆರೋಪಿ ಉಳಿದಿಬ್ಬರು ಆರೋಪಿಗಳ ಜೊತೆ ಸೇರಿ ಸಂತ್ರಸ್ತೆಗೆ ಬಿಯರ್ ಕುಡಿಸಿದ್ದು , ನಂತರ ಆಕೆಯನ್ನು ಮುಟ್ಟಲು ನೋಡಿದಾಗ ಆಕೆ ಬೊಬ್ಬೆ ಹೊಡೆದ ಕಾರಣಕ್ಕೆ ಅಲ್ಲಿಂದ ಓಡಿ ಹೋಗಿರುತ್ತಾನೆ ಎಂದು ನಮೂದಿಸಿರುತ್ತಾರೆ. ಈ ಹೊಸ ಆರೋಪ ದೂರಿನಲ್ಲಿ ಇಲ್ಲದ ಹೊಸ ವಿಷಯವಾಗಿದ್ದು , ದೂರಿನಲ್ಲಿ ಹೇಳಲಾದ ಮೂರನೇ ವ್ಯಕ್ತಿ ಎಲ್ಲಿ ಎನ್ನುವ ಸಂಶಯ ನಿರ್ಮಾಣವಾಗಿದೆ.

