ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತುಳು ಭಾಷೆಗೆ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಸರ್ಕಾರ ಮುಂದಾಗಿರುವುದನ್ನು ಸ್ವಾಗತಿಸುತ್ತೇವೆ. ಆದರೆ ತುಳುವನ್ನು ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಾರ್ಟಿ (ಎಎಪಿ) ದಕ್ಷಿಣ ಕನ್ನಡ ಜಿಲ್ಲಾ ಘಟಕದ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್ ಒತ್ತಾಯಿಸಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ಹಲವು ಪ್ರವಾಸೋದ್ಯಮ ಯೋಜನೆಗಳು ಸ್ಥಳೀಯ ಯುವಕರಿಗೆ ಉದ್ಯೋಗ ಸೃಷ್ಟಿಸುವ ದೃಷ್ಟಿಯಿಂದ ಸಮರ್ಪಕವಾಗಿಲ್ಲ ಎಂದು ಟೀಕಿಸಿದರು. ಮಂಗಳೂರು ಲೈಟ್ಹೌಸ್ ಬಳಿ ₹60.34 ಕೋಟಿ ವೆಚ್ಚದ 3-ಸ್ಟಾರ್ ಹೋಟೆಲ್, ಗುರುಪುರ ನದಿ ಮತ್ತು ದ್ವೀಪಗಳ ಅಭಿವೃದ್ಧಿಗೆ ₹125.34 ಕೋಟಿ, ಕೊಡಿಕಲ್ ರಿವರ್ಫ್ರಂಟ್ ಯೋಜನೆಗೆ ₹73 ಕೋಟಿ ಹಾಗೂ ತಣ್ಣೀರುಬಾವಿ ಬೀಚ್ ಗ್ಲಾಂಪಿಂಗ್ ಮತ್ತು ಸಾಗರ ಅನುಭವ ಕೇಂದ್ರಕ್ಕೆ ₹53 ಕೋಟಿ ವೆಚ್ಚ ಮಾಡುವ ಯೋಜನೆಗಳ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ 12 ಪರಿಸರ ಸೂಕ್ಷ್ಮ ದ್ವೀಪಗಳ ಅಭಿವೃದ್ಧಿಯ ಹೆಸರಿನಲ್ಲಿ ಬಹುಮಹಡಿ ಕಟ್ಟಡಗಳು ಅಥವಾ ಸೇತುವೆ ನಿರ್ಮಿಸುವುದು ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ. ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಿ ಕರಾವಳಿಯುದ್ದಕ್ಕೂ ತರಬೇತಿ ಪಡೆದ ಜೀವರಕ್ಷಕರನ್ನು ನೇಮಿಸುವುದು ಸೇರಿದಂತೆ ಮಾನವ ಸಂಪನ್ಮೂಲಕ್ಕೆ ಹೆಚ್ಚಿನ ಹೂಡಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಕಯಾಕಿಂಗ್, ಸ್ಕೂಬಾ ಡೈವಿಂಗ್, ಸರ್ಫಿಂಗ್, ಸ್ನಾರ್ಕೆಲಿಂಗ್, ಜಿಪ್ಲೈನಿಂಗ್ ಹಾಗೂ ಬೆಟ್ಟ ಹತ್ತುವಂತಹ ಸಾಹಸ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು. ತುಳು ಸಿನಿಮಾ, ಯಕ್ಷಗಾನ ಹಾಗೂ ಸ್ಥಳೀಯ ನಾಟಕ ಕಲಾವಿದರಿಗೆ ನೆರವು ನೀಡುವ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
ಅನಗತ್ಯ ನಿರ್ಮಾಣ ಕಾಮಗಾರಿಗಳಿಗೆ ಹಣ ವ್ಯಯಿಸುವ ಬದಲು ಸ್ಥಳೀಯ ಜನರನ್ನು ಒಳಗೊಂಡ ಹಾಗೂ ಕರಾವಳಿಯ ಯುವಕರಿಗೆ ಉದ್ಯೋಗ ಸೃಷ್ಟಿಸುವ ಪ್ರವಾಸೋದ್ಯಮ ಯೋಜನೆಗಳನ್ನು ರೂಪಿಸಬೇಕು. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರೊಂದಿಗೆ ಯಾವುದೇ ವೇದಿಕೆಯಲ್ಲಿ ಸಾರ್ವಜನಿಕ ಸಂವಾದ ನಡೆಸಲು ಎಎಪಿ ಸಿದ್ಧವಿದೆ ಎಂದು ವಿವೇಕಾನಂದ ಸಾಲಿನ್ಸ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್.ಎಲ್. ಪಿಂಟೊ, ದಕ್ಷಿಣ ಕನ್ನಡ ಮಹಿಳಾ ಘಟಕದ ಅಧ್ಯಕ್ಷೆ ಸೀಮಾ ಮಡಿವಾಳ, ಜಿಲ್ಲಾ ಕಾರ್ಯದರ್ಶಿಗಳಾದ ವಾಸುದೇವ್, ಕಬೀರ್ ಕಾಟಿಪಳ್ಳ, ಗ್ಲಾವಿನ್ ಡಿಸೋಜ ಹಾಗೂ ನಿನಾ ರೈ ಉಪಸ್ಥಿತರಿದ್ದರು.

