ಮಂಗಳೂರು: ತ್ರಿಷಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಸಂಸ್ಥೆಯು ತನ್ನ 28ನೇ ವರ್ಷದ ಸಂಸ್ಥಾಪನಾ ದಿನಾಚರಣೆಯನ್ನು ಆಗಸ್ಟ್ 10, ಸೋಮವಾರದಂದು ಬಲ್ಮಠದ ಡಾನ್ ಬಾಸ್ಕೊ ಸಭಾಂಗಣದಲ್ಲಿ ವಿಜೃಂಭಣೆಯಿಂದ ಆಚರಿಸಿತು.

ಬೆಳಿಗ್ಗೆ 9.30ಕ್ಕೆ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸ್ವಾಗತ ನೃತ್ಯ ಪ್ರದರ್ಶನ ಹಾಗೂ ದೀಪ ಬೆಳಗಿಸುವಿಕೆಯ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ತ್ರಿಷಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಮಂಜುನಾಥ ಕಾಮತ್ ಅವರು ಸ್ವಾಗತ ಭಾಷಣ ಮಾಡಿ, ಸಂಸ್ಥೆಯ 28 ವರ್ಷಗಳ ಶೈಕ್ಷಣಿಕ ಸೇವೆಯ ಹೆಜ್ಜೆಗುರುತುಗಳನ್ನು ಸ್ಮರಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ನೃತ್ಯ ಪ್ರದರ್ಶನ ನಡೆಯಿತು.

ಕಾರ್ಯಕ್ರಮದ ಗೌರವ ಅತಿಥಿಗಳಾಗಿ ತ್ರಿಷಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್‌ನ ಶೈಕ್ಷಣಿಕ ಸಲಹೆಗಾರರಾದ ಡಾ. ನಾರಾಯಣ ಕಾಯರ್ಕಟ್ಟೆ ಅವರು ಆಗಮಿಸಿ ಆಶಯ ನುಡಿಗಳನ್ನಾಡಿದರು. ಸಂಸ್ಥೆಯ ಸಂಸ್ಥಾಪಕರಾದ ಸಿಎ ಗೋಪಾಲ ಕೃಷ್ಣ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಎಸ್‌ಡಿಎಂ ಕಾಲೇಜು – ಎಂಬಿಎ, ಮಂಗಳೂರಿನ ಮಾಜಿ ನಿರ್ದೇಶಕ ಡಾ. ದೇವರಾಜ್ ಕೆ, ಕೈಗಾರಿಕಾ ಕ್ಷೇತ್ರದಲ್ಲಿ ಕೆಸಿಸಿಐನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಮೈತ್ರೇಯ ಎ, ಯಕ್ಷಗಾನ ಕ್ಷೇತ್ರದಲ್ಲಿ ಯಕ್ಷಗುರು ರಾಕೇಶ್ ರೈ ಅಡ್ಕ, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಮಧುಸೂದನ್ ಇ (ಎಂಬಿಬಿಎಸ್, ಎಂಡಿ, ಆರ್‌ಎಂಒ), ಕ್ರೀಡಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಅಥ್ಲೀಟ್ ಕುಮಾರಿ ಶ್ರೀಮಾ ಪ್ರಿಯದರ್ಶಿನಿ,

ಸಮಾಜ ಸೇವಾ ಕ್ಷೇತ್ರದಲ್ಲಿ ಮಾರುತಿ ಜನಸೇವಾ ಸಂಘ ಉಳ್ಳಾಲದ ಅಧ್ಯಕ್ಷ ಶ್ರೀ ಅನಿಲ್ ಚರಣ್, ರೆಡ್‌ಕ್ರಾಸ್ ಸೇವೆಗಾಗಿ ಸಿಎ ಶಾಂತಾರಾಮ ಶೆಟ್ಟಿ, ಸೇನಾ ಕ್ಷೇತ್ರದಲ್ಲಿ ಭಾರತೀಯ ನೌಕಾಪಡೆಯ ಮಾಜಿ ಮುಖ್ಯ ತಾಂತ್ರಿಕ ಅಧಿಕಾರಿ ಶ್ರೀ ವಿಕ್ರಮದತ್ತ, ಚಿತ್ರರಂಗ ಕ್ಷೇತ್ರದಲ್ಲಿ ಚಲನಚಿತ್ರ ಹಾಗೂ ರಂಗಭೂಮಿ ಕಲಾವಿದೆ ಕುಮಾರಿ ರೂಪಾ ವರ್ಕಾಡಿ, ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ನಮ್ಮ ಕುಡ್ಲದ ಸಿಒಒ ಕದ್ರಿ ಶ್ರೀ ನವನೀತ್ ಶೆಟ್ಟಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಬಳಿಕ ಗೌರವ ಅತಿಥಿ ಡಾ. ನಾರಾಯಣ ಕಾಯರ್ಕಟ್ಟೆ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ತದನಂತರ ಶ್ರೀ ರಾಮ್ ಪ್ರಭು, ಟ್ರಸ್ಟೀ ಸಿದ್ಧಾಂತ್ ಫೌಂಡೇಶನ್, ಅವರನ್ನು ಗೌರವಿಸಲಾಯಿತು ಮುಂದುವರಿದು ಸಂಸ್ಥೆಯ ಸಂಸ್ಥಾಪಕರಾದ ಸಿ ಎ ಗೋಪಾಲಕೃಷ್ಣ ಭಟ್ ಹಾಗೂ ನಮಿತಾ ಜಿ ಭಟ್ ಅವರನ್ನು ಸನ್ಮಾನಿಸಲಾಯಿತು. ಹಾಗೂ ಕೊನೆಯಲ್ಲಿ ತ್ರಿಷಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುಪ್ರಭಾ ಎಂ ವಂದಿಸಿದರು.ಈ ಸಂದರ್ಭದಲ್ಲಿ ತ್ರಿಷಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಯಶಸ್ವಿನಿ ಯಶ್‌ಪಾಲ್ ಅವರು ಉಪಸ್ಥಿತರಿದ್ದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಗೋಪಾಲ ಕೃಷ್ಣ ಭಟ್ ಅವರು ಪ್ರಪಂಚದಲ್ಲಿ ಇರುವವರಲ್ಲಿ ಕೆಲವರು ಮಾತ್ರ ಪ್ರಪಂಚದ ನಕ್ಷೆಯನ್ನೇ ಬದಲಾಯಿಸುತ್ತಾರೆ ಎಂದು ಹೇಳಿದರು. ಒಬ್ಬ ಗೋಪಾಲ್ ಒಂದು ಸಂಸ್ಥೆಯನ್ನು ಮಾಡಿದ್ದಾರೆ ಅಂದರೆ ನೆರೆದಿರುವ ಎಲ್ಲಾ ವಿದ್ಯಾರ್ಥಿಗಳು ಇಂತಹ ಸಾವಿರಾರು ಸಂಸ್ಥೆಯನ್ನು ಕಟ್ಟಬಹುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಅವರು ಅವರ ಮಾವ ಕೇಶವ ಪ್ರಭು ಅವರನ್ನು ಸ್ಮರಿಸಿದರು.

ತಾನು ಸೇವಾ ಭಾರತಿ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದಿದ್ದು ತಂದೆ ತಾಯಿ ಕೃಷಿಕರಾಗಿದ್ದು ನನಗೆ ದೇಶದ ಬಗ್ಗೆ ಕಾಳಜಿ ಇರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ, ಅವರಿಗೆ ಕಲಿಸಿದ ಮುಕುಂದ್ ಮಾಸ್ಟರ್ ಉಪಸ್ಥಿತರಿದ್ದರು. •ಸಂಸ್ಥೆಯ ಬೆಳವಣಿಗೆಯಲ್ಲಿ ಎಲ್ಲಾ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಹಾಗೂ ಪೋಷಕರ ಸಹಕಾರವನ್ನು ಸ್ಮರಿಸಿ, ಮುಂದಿನ ದಿನಗಳಲ್ಲಿ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯುವ ಆಶಯ ವ್ಯಕ್ತಪಡಿಸಿದರು. ಕಾರ್ಯಕ್ರಮದ ಬಳಿಕ ವಂದನಾರ್ಪಣೆ ಸಲ್ಲಿಸಲಾಯಿತು ಹಾಗೂ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
ಈ ಸಮಾರಂಭದಲ್ಲಿ ತ್ರಿಷಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್‌ನ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

