ಮಂಗಳೂರು : ಧರ್ಮಸ್ಥಳದಲ್ಲಿ ಕ್ಷೇತ್ರದ ವಿರುದ್ದ ಷಡ್ಯಂತ ನಡೆಸಲಾಗುತ್ತಿದ್ದು, ಭಯೋತ್ಪಾದಕ ಚಟುವಟಿಕೆಗೂ ಇಲ್ಲಿ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಈ ಷಡ್ಯಂತ್ರದ ಘಟನೆಗೆ ಲಿಂಕ್ ಇದ್ದು ಈ ಪ್ರಕರಣವನ್ನು ಎನ್ ಐಎಗೆ ವಹಿಸಿ ಎಂದು ಪುಣ್ಯ ಕ್ಷೇತ್ರ ಸಂರಕ್ಷಣಾ ಸಮಿತಿಯ ವಸಂತ ಗಿಳಿಯಾರ್ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಲು ವಿದೇಶಿ ಹಣ ಬಳಕೆ ಮಾಡಲಾಗಿದೆ ಎಂಬ ಅನುಮಾನವಿದೆ. ಭಯೋತ್ಪಾದಕ ಸಂಘಟನೆಗಳು ಧರ್ಮಸ್ಥಳವನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಎನ್ ಐಎ ಹೇಳಿದೆ. ಈ ಹಿಂದೆಯೂ ಧರ್ಮಸ್ಥಳ ನಕ್ಸಲ್ ಸಂಘಟನೆಗಳ ಟಾರ್ಗೆಟ್ ಆಗಿತ್ತು, ಅಲ್ಲದೆ ಈಗಿನ ಪ್ರಕರಣದಲ್ಲಿ ವಿದೇಶಿ ಸಂಘಟನೆಗಳ ಕೈವಾಡವಿರುವ ಸಾಧ್ಯತೆ ಇದ್ದು, ಈ ಹಿನ್ನಲೆ ಈ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದರು.
ಈಗ ದೂರು ನೀಡಿರುವ ಮುಸುಕುಧಾರಿ ಯಾರ ಮೇಲೆ ಆರೋಪ ಮಾಡಿದ್ದಾನೆ ಎಂದು ಇನ್ನೂ ದೃಢಪಟ್ಟಿಲ್ಲ. ಯಾವುದೇ ಸುದ್ದಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿಗಳು, ಶ್ರೀ ಮಂಜುನಾಥ ಸ್ವಾಮಿಗಳ ಫೋಟೊ ಬಳಕೆ ತಪ್ಪು. ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ. ಹೀಗಾಗಿ ಇದೇ ತಿಂಗಳು ಧರ್ಮಸ್ಥಳ ಕ್ಷೇತ್ರದಲ್ಲಿ ಧರ್ಮಜಾಗರಣಾ ಸಮಾವೇಶ ನಡೆಸುತ್ತೇವೆ ಎಂದರು.
ಧರ್ಮಸ್ಥಳ ವಿರುದ್ಧ ಕೆಲ ಅನಧಿಕೃತ ಮಾಧ್ಯಮಗಳು, ಯೂಟ್ಯೂಬರ್‌ಗಳಿಂದ ಸುಳ್ಳು ಸುದ್ದಿ ಪ್ರಸಾರ ಮಾಡಲಾಗುತ್ತಿದೆ. ಇದರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಸಂತ್ ಗಿಳಿಯಾರ್ ಆಗ್ರಹಿಸಿದರು.

