ಮಂಗಳೂರು: ಸಂಸ್ಕೃತ ಭಾರತೀ, ಮಂಗಳೂರು ಇದರ ವತಿಯಿಂದ ನಡೆಸಲಾದ ದಶದಿನ ಸಂಸ್ಕೃತ ಸಂಭಾಷಣಾ ಕಾರ್ಯಕ್ರಮ ಇಂದು ಸಮಾಪನಗೊಂಡಿತು.

ನಗರದ ಥಿಯೋಸಾಫಿಕಲ್ ಸೊಸೈಟಿಯಲ್ಲಿ ನಿರಂತರ ಹತ್ತು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಮೂವತ್ತಕ್ಕೂ ಮಿಕ್ಕಿ ವಿವಿಧ ವಯೋಮಾನದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಪ್ರಸಿದ್ಧ ಲೆಕ್ಕ ಪರಿಶೋಧಕರಾದ ಎಸ್.ಎಸ್.ನಾಯಕ್‌ರವರು ಮಾತನಾಡಿ ಸಂಸ್ಕೃತ ಭಾಷೆ ಭಾರತದ ಅಸ್ಮಿತೆ. ವೇದಗಳು, ಪುರಾಣಗಳು, ಉಪನಿಷತ್ತುಗಳು, ರಾಮಾಯಣ ಮಹಾಭಾರತದಂತಹ ಮಹಾ ಗ್ರಂಥಗಳು ಸಂಸ್ಕೃತದಲ್ಲಿ ಇದ್ದು ಅವೇ ನಮ್ಮ ಸಂಪತ್ತು ಎಂದರು. ಹಲವು ಸುಭಾಷಿತಗಳನ್ನು ನಿರರ್ಗಳವಾಗಿ ಹೇಳಿದ ಅವರು ತಮ್ಮ ಜೀವನದಲ್ಲಿ ಸಂಸ್ಕೃತ ಬಹಳಷ್ಟು ಪರಿಣಾಮ ಬೀರಿದ್ದನ್ನು ವಿವರಿಸಿದರು.

ಮುಖ್ಯ ಭಾಷಣಕಾರರಾಗಿದ್ದ ಸಂಸ್ಕೃತ ವಿದ್ವಾನ್ ಡಾ.ಮಧುಕೇಶ್ವರ ಶಾಸ್ತ್ರಿಯವರು ‘ಸಂಸ್ಕೃತ ನಮ್ಮ ಮೂಲ ಮಾತೃ ಭಾಷೆ. ಕೇವಲ ಒಂದು ಸುಭಾಷಿತ ಇದ್ದರೆ ನಾವು ಒಂದು ಗಂಟೆ ಉಪನ್ಯಾಸ ಮಾಡಬಹುದು. ಅದು ಸಂಸ್ಕೃತದ ಶಕ್ತಿ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಥಿಯೋಸಾಫಿಕಲ್ ಸೊಸೈಟಿಯ ಅಧ್ಯಕ್ಷ ಶ್ರೀ ನರಸಿಂಹ ಶೆಟ್ಟಿಯವರು ಸಂಸ್ಕೃತ ಭಾಷಾ ಕಲಿಕೆಯ ಮಹತ್ವ ತಿಳಿಸಿ, ವಿದ್ಯಾರ್ಥಿಗಳು ಸಂಭಾಷಣಾ ಶಿಬಿರದಲ್ಲಿ ಭಾಗವಹಿಸಿ ಮುಂದಕ್ಕೆ ಸಂಸ್ಕೃತ ಎಂ.ಎ. ಮಾಡಲು ಸಲಹೆ ನೀಡಿದರು.

ಶಿಬಿರದ ಶಿಕ್ಷಕಿ ಶ್ರೀಮತಿ ಸಂಧ್ಯಾ ಕಾಮತ್‌ರವರು ಪ್ರಸ್ತಾವನೆ ಮಾಡಿ ಸಂಸ್ಕೃತ ಹಾಡು ಹಾಡಿದರು. ವಿದ್ಯಾರ್ಥಿಗಳು ಶ್ರೀಮತಿ ಸಂಧ್ಯಾ ಕಾಮತ್‌ರವರಿಗೆ ಗೌರವಾರ್ಪಣೆ ಮಾಡಿದರು.

ಶಿಬಿರಾರ್ಥಿಗಳು ಸಂಸ್ಕೃತ ಭಾಷೆಯಲ್ಲೆ ಪ್ರಹಸನ, ಹಾಡು ಮತ್ತು ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀ ಸತ್ಯನಾರಾಯಣ, ಶ್ರೀ ಗಜಾನನ ಬೋವಿಕಾನ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ವಿದ್ಯಾರವರು ಸ್ವಾಗತಿಸಿ, ಸೌಮ್ಯರವರು ವಂದಿಸಿದರು. ರೂಪಾರವರು ಕಾರ್ಯಕ್ರಮ ನಿರ್ವಹಿಸಿದರು.