ಮಂಗಳೂರು : ಕುದ್ರೋಳಿ ದೇವಸ್ಥಾನದಲ್ಲಿ ದಸರಾ ಹಿನ್ನೆಲೆ ಜನಜಂಗುಳಿ ಇರುವಾಗ ಆಟೋ ಚಾಲಕನೊಬ್ಬ ಮುಖ್ಯ ದ್ವಾರದ ಬಳಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ್ದಾನೆಂದು ಆರೋಪಿಸಿ ಟ್ರಾಫಿಕ್ ಪೊಲೀಸರು ಆತನನ್ನು ತಡೆದು ದಂಡ ವಿಧಿಸಿದ್ದು ಸ್ಥಳದಲ್ಲಿ ಆಟೋ ಚಾಲಕರ ಆಕ್ರೋಶಕ್ಕೂ ಕಾರಣವಾಗಿ ಇದರ ವಿಡಿಯೋ ವೈರಲ್ ಆಗಿದೆ.
ಸೆ.24ರಂದು ರಾತ್ರಿ 9.30 ಗಂಟೆ ಸಮಯದಲ್ಲಿ ಆಟೋ ಚಾಲಕ ಶೈಲೇಶ್ (28) ಎಂಬವರು ಕುದ್ರೋಳಿ ದೇವಸ್ಥಾನದ ಮುಖ್ಯದ್ವಾರದ ಸಾರ್ವಜನಿಕ ರಸ್ತೆಯಲ್ಲಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ್ದಾರೆಂದು ಪೊಲೀಸ್ ಸಿಬ್ಬಂದಿ ದಂಡ ವಿಧಿಸಿದ್ದಾರೆ.
ಆದರೆ ಇದರಿಂದ ಸಿಟ್ಟಿಗೆದ್ದ ಆಟೋ ಚಾಲಕ 500 ರೂ. ಮಾಡಲು ಎಷ್ಟು ಕಷ್ಟ ಇದೆ ಗೊತ್ತಾ, ನೀವು ದಂಡ ಹಾಕ್ತಿರಿ, ನಾನು ಏನು ತಪ್ಪು ಮಾಡಿದ್ದೇನೆ, ನಿಮಗೆ ಏನೂ ತಪ್ಪು ಮಾತಾಡಿಲ್ಲ ಅಲ್ವಾ ಎಂದು ಹೇಳಿ ಒಂದು ಕೈಯಲ್ಲಿ ವಿಡಿಯೋ ಮಾಡುತ್ತ ಸಾಗಿದ್ದಾನೆ. ಆದರೆ ಪೊಲೀಸ್ ಎಎಸ್‌ಐ ಒಬ್ಬರು, ಚಾಲಕನ ಸೊಂಟದ ಬೆಲ್ಟ್ ಹಿಡಿದು ನಿನ್ನನ್ನು ಬಿಡುವುದಿಲ್ಲ ಎನ್ನುತ್ತ ಹಿಡಿದುಕೊಂಡು ಹೋಗಿದ್ದಾರೆ.
ಈ ವೇಳೆ, ಇತರ ಆಟೋ ಚಾಲಕರು ಕೂಡ ಸೇರಿದ್ದು ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಟಾಪಟಿ ನಡೆಸುವ ವಿಡಿಯೋ ವೈರಲ್ ಆಗಿದ್ದು ಪೊಲೀಸರು ಕೇಸು ಹಾಕೋದಾಗಿ ಹೇಳುತ್ತಿರುವುದು ವಿಡಿಯೋದಲ್ಲಿದೆ. ಪೊಲೀಸರ ಮಾಹಿತಿ ಪ್ರಕಾರ, ನಂತರ ಆಟೋ ಚಾಲಕ ಶೈಲೇಶ್ ಸ್ವಇಚ್ಚೆಯಿಂದ ಕ್ಷಮೆ ಯಾಚಿಸಿದ್ದು ಜೊತೆಯಲ್ಲಿ ಘಟನೆ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ಸದ್ರಿ ಆಟೋ ಚಾಲಕನಿಗೆ ರಸ್ತೆ ಸಂಚಾರಕ್ಕೆ ಅಡೆ ತಡೆ ಮತ್ತು ಪೊಲೀಸ್ ಅಧಿಕಾರಿ ನೀಡಿದ ಸೂಚನೆಯನ್ನು ಪಾಲಿಸದೇ ಇರುವ ಬಗ್ಗೆ ಐಎಂವಿ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.

