ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ನಾರಿಶಕ್ತಿ ವಂದನ್ ಅಧಿನಿಯಮ’ವು ಕೇವಲ ರಾಜಕೀಯ ಮೀಸಲಾತಿಯಲ್ಲ, ದೇಶದ ಮಾತೃಶಕ್ತಿಗೆ ಸಲ್ಲಿಸಿದ ಗೌರವವಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಐತಿಹಾಸಿಕ ಮಸೂದೆಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ತನ್ನ ಮಹಿಳಾ ವಿರೋಧಿ ಮನಸ್ಥಿತಿಯನ್ನು ಮತ್ತೊಮ್ಮೆ ಹೊರಹಾಕಿದೆ ಎಂದು ಆರೋಪಿಸಿದರು.

ಕ್ಷೇತ್ರ ಮರುವಿಂಗಡಣೆಯ ಬಳಿಕ ದಕ್ಷಿಣ ಭಾರತದ ಪ್ರಾತಿನಿಧ್ಯ ಕುಸಿಯಲಿದೆ ಎಂಬ ಕಾಂಗ್ರೆಸ್ ಆರೋಪವನ್ನು ತಳ್ಳಿ ಹಾಕಿದ ಅವರು, ಕರ್ನಾಟಕದಲ್ಲಿ ಪ್ರಸ್ತುತ 28 ಲೋಕಸಭಾ ಸ್ಥಾನಗಳು 42ಕ್ಕೆ ಏರಿಕೆಯಾಗಲಿವೆ. ಅದೇ ರೀತಿ ಆಂಧ್ರಪ್ರದೇಶದಲ್ಲಿ 25ರಿಂದ 38ಕ್ಕೆ, ತಮಿಳುನಾಡಿನಲ್ಲಿ 39ರಿಂದ 59ಕ್ಕೆ ಏರಿಕೆಯಾಗಲಿದ್ದು, ದಕ್ಷಿಣ ಭಾರತದ ಒಟ್ಟು ಪ್ರಾತಿನಿಧ್ಯ 129ರಿಂದ 195ಕ್ಕೆ ಹೆಚ್ಚಾಗಲಿದೆ. ಹೀಗಿರುವಾಗ ದಕ್ಷಿಣಕ್ಕೆ ಅನ್ಯಾಯವಾಗುತ್ತದೆ ಎನ್ನುವುದು ಸರಿಯಲ್ಲ ಎಂದು ಪ್ರಶ್ನಿಸಿದರು.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಸೂದೆ ಪ್ರತಿಯನ್ನು ಸುಟ್ಟಿರುವುದು ಮಹಿಳೆಯರ ಹಕ್ಕಿಗೆ ಅವಮಾನವಾಗಿದೆ ಎಂದು ಟೀಕಿಸಿದ ಅವರು, ದಕ್ಷಿಣದ ಧ್ವನಿ ಕುಂಠಿತಗೊಳ್ಳುತ್ತದೆ ಎಂಬ ಹೆಸರಿನಲ್ಲಿ ಕಾಂಗ್ರೆಸ್ ಮಿತ್ರಪಕ್ಷಗಳು ಜನರನ್ನು ತಪ್ಪುದಾರಿಗೆಳೆಯುತ್ತಿವೆ ಎಂದು ಆರೋಪಿಸಿದರು.

ಸಂಸದನಾಗಿ ಸಂಸತ್ತಿನಲ್ಲಿ ಹಲವು ಮಸೂದೆಗಳು ಅಂಗೀಕಾರವಾಗುವುದನ್ನು ನೋಡುವ ಅವಕಾಶ ಸಿಕ್ಕಿರುವುದು ತನ್ನ ಭಾಗ್ಯ ಎಂದು ಹೇಳಿದ ಅವರು, ಭಾರತದ ಸಂಸ್ಕೃತಿ ಮಾತೃಪ್ರಧಾನವಾಗಿದ್ದು, ಮಹಿಳೆಯರಿಗೆ ಗೌರವ ನೀಡಲಾಗುತ್ತದೆ. ಮಹಿಳಾ ಗೌರವದ ಸಂಕೇತವಾಗಿ ಈ ಮಸೂದೆ ಅಂಗೀಕಾರವಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಮಸೂದೆಗೆ ಬೆಂಬಲ ನೀಡದೇ ಮಹಿಳಾ ಸಮುದಾಯಕ್ಕೆ ಅನ್ಯಾಯ ಮಾಡಿವೆ ಎಂದು ಕಿಡಿಕಾರಿದರು.

ಮಹಿಳಾ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಪ್ರಾಮಾಣಿಕತೆ ಇಲ್ಲ ಎಂದು ದೂರಿದ ಅವರು, 1996ರಿಂದಲೇ ಮಸೂದೆಯನ್ನು ಮುಂದೂಡುತ್ತಾ ಬಂದ ಕಾಂಗ್ರೆಸ್ 2013-14ರಲ್ಲಿಯೂ ಜಾರಿಗೆ ತರಲು ವಿಫಲವಾಯಿತು. ಈಗಲೂ ಸಂಸತ್ತಿನಲ್ಲಿ ಮಸೂದೆಗೆ ವಿರೋಧ ವ್ಯಕ್ತಪಡಿಸುವ ಮೂಲಕ ತನ್ನ ನಿಲುವನ್ನು ಮತ್ತೊಮ್ಮೆ ತೋರಿಸಿದೆ ಎಂದು ಹೇಳಿದರು.

ಜನಗಣತಿ ಹಾಗೂ ಕ್ಷೇತ್ರ ಮರುವಿಂಗಡಣೆಯ ಬಳಿಕ ವೈಜ್ಞಾನಿಕವಾಗಿ ಮೀಸಲಾತಿ ಜಾರಿಗೆ ತರುವುದು ಸಂವಿಧಾನಬದ್ಧ ಕ್ರಮವಾಗಿದ್ದು, ಇದನ್ನು ವಿರೋಧಿಸುವವರು ಮಹಿಳೆಯರ ಏಳಿಗೆಯನ್ನು ಸಹಿಸದವರೇ ಆಗಿದ್ದಾರೆ ಎಂದು ಹೇಳಿದರು.

ಉಜ್ವಲ ಹಾಗೂ ಜನಧನ್ ಯೋಜನೆಗಳ ಮೂಲಕ ಮಹಿಳೆಯರು ಆರ್ಥಿಕವಾಗಿ ಸಬಲರಾಗಿದ್ದು, ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿಯೂ ನಿರ್ಣಾಯಕ ಪಾತ್ರವಹಿಸಲಿದ್ದಾರೆ. 2026ರ ನಂತರ ನಡೆಯಲಿರುವ ಡೆಲಿಮಿಟೇಷನ್ ಪ್ರಕ್ರಿಯೆ ನಾರಿಶಕ್ತಿಗೆ ಹೊಸ ದಿಕ್ಕು ತೋರಿಸಲಿದೆ. ಹೊಸದಾಗಿ ಸೃಷ್ಟಿಯಾಗುವ ಸ್ಥಾನಗಳಲ್ಲಿಯೂ ಶೇ.33ರಷ್ಟು ಮೀಸಲಾತಿ ಮಹಿಳೆಯರಿಗೆ ಮೀಸಲಾಗಲಿದೆ ಎಂದು ಪುನರುಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಸಂಜಯ್ ಪ್ರಭು, ಶಾಂತಿ ಪ್ರಸಾದ್ ಹೆಗ್ಡೆ, ನಂದನ್ ಮಲ್ಯ, ಮಂಜುಳಾ ಅನಿಲ್ ರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

View this post on Instagram

A post shared by News Karnataka (@newskarnataka)