ಮಂಗಳೂರು : ಎಂ.ಜಿ. ರೋಡ್ ಸಹಿತ ಹಲವು ಕಡೆಗಳಲ್ಲಿ ಮತ್ತೆ ಮತ್ತೆ ಹೊಸ ಪ್ಲೆಕ್ಸ್ಗಳು ಅಳವಡಿಕೆಯಾಗುತ್ತಿವೆ. ಆದರೆ ಪಾಲಿಕೆ ಅಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುತ್ತಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆ ಗಣೇಶೋತ್ಸವ, ಮೊಸರು ಕುಡಿಕೆ ಇನ್ನಿತರ ಸಂದರ್ಭಗಳಲ್ಲಿ ಜನ ಸಾಮಾನ್ಯರು ಅಳವಡಿಸಿದ್ದ ಪ್ಲೆಕ್ಸ್ ಗಳನ್ನು ಅಧಿಕಾರಿಗಳು ತೆರವುಗೊಳಿಸಿದ್ದರು. ಆದರೆ ನವರಾತ್ರಿ ಸಮಯದಲ್ಲಿ ಪಾಲಿಕೆಯ ಸುತ್ತಮುತ್ತ ಪ್ಲೆಕ್ಸ್ ಗಳಿವೆ. ಅಧಿಕಾರಿಗಳು ಓಡಾಡುವ ಜಾಗಗಳಲ್ಲೇ ಪ್ಲೆಕ್ಸ್ ಗಳಿದ್ದರೂ ತೆರವುಗೊಳಿಸಿಲ್ಲ ಎನ್ನುವುದು ಕೆಲವರ ಆಕ್ರೋಶ.
ಈಗ ಹಾಕಲಾಗುತ್ತಿರುವ ಪ್ಲೆಕ್ಸ್ಗಳ ಹಿಂದೆ ಪ್ರಭಾವಿಗಳು, ರಾಜಕೀಯ ನಾಯಕರ ಜತೆ ನಂಟು ಹೊಂದಿರುವ ವ್ಯಕ್ತಿಗಳಿರುವುದು ಪಾಲಿಕೆಗೂ ಬಿಸಿ ತುಪ್ಪದಂತಾಗಿದೆ. ಆದರೆ, ಪ್ರಭಾವಿಗಳಿಗೊಂದು ನ್ಯಾಯ ಜನಸಾಮಾನ್ಯರಿಗೊಂದು ನ್ಯಾಯವೇ? ಎಂದು ನಾಗರಿಕರು ಪ್ರಶ್ನಿಸಿದ್ದಾರೆ.
ಪಾಲಿಕೆಯಿಂದ ಒಂದು ತಂಡ ನಗರದ ಸ್ವಚ್ಛತೆಯ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅಕ್ರಮವಾಗಿ ಅಳವಡಿಸಿರುವ ಪ್ಲೆಕ್ಸ್, ಬ್ಯಾನರ್ಗಳನ್ನು ತೆರವುಗೊಳಿಸುತ್ತಿದೆ. ಹೀಗಾಗಿ, ಪಂಪ್ ವೆಲ್ ಸೇರಿದಂತೆ ನಗರದ ಅನೇಕ ಕಡೆಗಳಲ್ಲಿ ಈ ಹಿಂದೆ ರಾಜಾರೋಷವಾಗಿ ಅಳವಡಿಸುತ್ತಿದ್ದ ಪ್ಲೆಕ್ಸ್ ಗಳಿಗೆ ಕಡಿವಾಣ ಬಿದ್ದಿದೆ. ಆದರೆ, ಇದೀಗ ದಸರಾ ಮೆರವಣಿಗೆ ಸಾಗುವ ಎಂ.ಜಿ. ರಸ್ತೆಯಲ್ಲಿ ಪ್ಲೆಕ್ಸ್ ಗಳ ಸರತಿ ಸಾಲೇ ಇದೆ.
ದಂಡ ಸಂಗ್ರಹ ನೀರಸ
ಪ್ಲೆಕ್ಸ್ ಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಕ್ರಮವಾಗಿ ಅಳವಡಿಸುವವರು ಹಾಗೂ ಮುದ್ರಕರಿಗೆ ದಂಡ ವಿಧಿಸುವ ನಿರ್ಧಾರಕ್ಕೆ ಪಾಲಿಕೆ ಮುಂದಾಗಿತ್ತು. ಆದರೆ, ಇದುವರೆಗೆ ಕೆಲವೇ ಕೆಲವು ಜನರಿಗೆ ದಂಡ ವಿಧಿಸಲಾಗಿದೆ. ಮುದ್ರಕರಿಗೆ ಮೊದಲ ಹಂತದಲ್ಲಿ ದಂಡ ವಿಧಿಸಿ ಬಳಿಕ ಪರವಾನಿಗೆ ರದ್ದುಗೊಳಿಸುವ ಬಗ್ಗೆ ಪಾಲಿಕೆ ಹೇಳಿತ್ತು. ಆದರೆ, ಒಂದೆರಡು ಮುದ್ರಕರಿಗೆ ಸಣ್ಣ ಪ್ರಮಾಣದಲ್ಲಿ ದಂಡ ವಿಧಿಸಿದ್ದು ಬಿಟ್ಟರೆ ಹೆಚ್ಚಿನ ಪ್ರಗತಿಯಾಗಿಲ್ಲ.
ಡಿವೈಡರ್ನಲ್ಲೇ ಅಪಾಯಕಾರಿ ಪ್ಲೆಕ್ಸ್
ಎಂ.ಜಿ. ರಸ್ತೆಯ ಡಿವೈಡರ್ಗಳಲ್ಲಿ ಅಪಾಯಕಾರಿ ರೀತಿಯಲ್ಲಿ ಕಟೌಟ್ ಅಳವಡಿಸಲಾಗಿದೆ. ಇದು ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಅಪಾಯಕಾರಿಯಾಗಿದೆ. ನಗರದಲ್ಲಿ ಅಗಾಗೆ ಗಾಳಿ ಮಳೆಯಾಗುತ್ತಿದ್ದು ಕಟೌಟ್ ಗಳಿಂದ ಅಪಾಯ ಹೆಚ್ಚಿದೆ.

